
ಬೆಂಗಳೂರು, ಜು. ೧೯- ಬರ ಸಂದರ್ಭದಲ್ಲಿ ಜೀವ ಸಂಕುಲಗಳಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ ಬರ ಪರಿಸ್ಥಿತಿ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಕೃಷಿ ಚಟುವಟಿಕೆ ಹಾಗೂ ಉದ್ಯೋಗ ವಿಷಯಗಳ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಸಿಇಓಗಳ ಜತೆ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು, ಕರ್ನಾಟಕದಲ್ಲಿ ಭೀಕರವಾದ ಬರಗಾಲ ಕಾಣುತ್ತಿದ್ದೇವೆ. ಎಲ್‌ನಿನೋ ಬಂದಾಗಲೆಲ್ಲಾ ಸಮುದ್ರದಲ್ಲಿ ೨ ಡಿಗ್ರಿ ಉಷ್ಣಾಂಶ ಹೆಚ್ಚಾಗುತ್ತದೆ. ರಾಜ್ಯದಲ್ಲಿಯೂ ೪ ರಿಂದ ೬ ಡಿಗ್ರಿ ತಾಪಮಾನ ಜಾಸ್ತಿಯಾಗಿದೆ. ಈ ಬಾರಿ ರಾಜ್ಯದಲ್ಲಿ ಶೇ. ೬೮ ರಷ್ಟು ಮಳೆ ಕೊರತೆಯಾಗಿದೆ ಎಂದರು.
ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುವ ಗ್ರಾಮ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜಲಾಶಯದ ನೀರು ಬೆಳೆಗೆ ಪೂರೈಕೆಯಾಗಬಾರದು ಎಂದು ಈಗಾಗಲೇ ಮುಖ್ಯಮಂತ್ರಿಗಳು ನಿರ್ದೇಶನ ಕೊಟ್ಟಿದ್ದಾರೆ. ಬಹಳ ಗಂಭೀರವಾದ ಪರಿಸ್ಥಿತಿ ಇದೆ. ನೀವೆಲ್ಲರೂ ಈ ಬಗ್ಗೆ ಸಮರ್ಥವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯ ೩೨೯ ಕೋಟಿ ರೂ. ಇದೆ. ಇದನ್ನು ನಾವು ಸದ್ಭಳಕೆ ಮಾಡದಿದ್ದರೆ ಮತ್ತಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಹಣವನ್ನು ಸಮರ್ಪಕವಾಗಿ ಬಳಸಬೇಕು ಎಂದು ನಿರ್ದೇಶಿಸಿದರು.
ಬಳ್ಳಾರಿ. ಕಲ್ಬುರ್ಗಿ, ರಾಯಚೂರು, ಯಾದಗಿರಿ, ವಿಜಯನಗರ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಜನರು ಗುಳೆ ಹೋಗುತ್ತಿದ್ದಾರೆ. ಜನರಿಗೆ ಉದ್ಯೋಗ ನೀಡಲು ವಿಬಿ ಜಿ ರಾಮ್ ಜಿ ಯೋಜನೆಯನ್ನು ತ್ವರಿತವಾಗಿ ಆರಂಭಿಸುವಂತೆಯೂ ಸೂಚನೆ ನೀಡಿದರು.
ಬೋರ್‌ವೆಲ್ ಕೊರೆಸಲು ಟಾಸ್ಕ್‌ಫೋರ್ಸ್‌ನಲ್ಲಿ ತೀರ್ಮಾನ ಮಾಡಬೇಕು. ಪ್ರತಿ ವಾರ ಟಾಸ್ಕ್‌ಫೋರ್ಸ್ ಸಭೆ ನಡೆಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ರಾಜ್ಯದ ೩೧ ಜಿಲ್ಲೆಗಳಲ್ಲೂ ಮಳೆ ಕಡಿಮೆಯಾಗಿದೆ. ಶೇ. ೯ ರಿಂದ ಶೇ. ೬೮ ರಷ್ಟು ಮಳೆ ಕೊರತೆ ಕಾಣಿಸಿಕೊಂಡಿದೆ. ೨೬ ಜಿಲ್ಲೆಗಳಲ್ಲಿ ಮಳೆಯ ಅತೀವ ಅಭಾವವಿದೆ. ೧೭೮ ತಾಲ್ಲೂಕುಗಳಲ್ಲಿ ಮಳೆ ಕೊರತೆಯಾಗಿದ್ದು, ೨೦ ತಾಲ್ಲೂಕುಗಳಲ್ಲಿ ತೀವ್ರ ಕೊರತೆ ಇದೆ. ಹಾಗಾಗಿ ಅಧಿಕಾರಿಗಳು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಕಾರ್ಯೋನ್ಮುಖರಾಗಬೇಕು ಎಂದು ಸೂಚಿಸಿದರು.
ಬರಗಾಲದ ಸಂದರ್ಭದಲ್ಲಿ ಸಮರ್ಪಕ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಿ. ಕಲುಷಿತ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಿ, ಜತೆಗೆ ಬರಗಾಲದ ಸಂದರ್ಭಗಳಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆಯೂ ನಿಗಾ ವಹಿಸಿ ತಾಕೀತು ಮಾಡಿದರು.
ಅಣೆಕಟ್ಟು ಮತ್ತು ಕೆರೆಕಟ್ಟೆಗಳಲ್ಲಿನ ನೀರಿನ ಅತ್ಯಂತ ಎಚ್ಚರಿಕೆಯಿಂದ ಕಾಪಾಡಿ. ರೈತರಿಗೆ ಕಡಿಮೆ ನೀರು ಬಯಸುವ ಬೆಳೆಯನ್ನು ಬೆಳೆಯಲು ಉತ್ತೇಜಿಸಿ ಎಂದು ಸಲಹೆ ಮಾಡಿದರು.
ಈ ಬಾರಿ ಬಂದಿರುವ ಬರ ಪರಿಸ್ಥಿತಿಯು ಹಿಂದಿನ ಬರ ಪರಿಸ್ಥಿತಿಯಂತೆ ಅಲ್ಲ. ೨೦೨೩ ರಲ್ಲಿ ದೊಡ್ಡ ಬರ ಬಂದಾಗಲೂ ಅಣೆಕಟ್ಟೆಗಳಲ್ಲಿ ನೀರಿತ್ತು. ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿಗೆ ಸಮಸ್ಯೆಯಾಗಿರಲಿಲ್ಲ. ೨೦೨೩ ರ ಬರವನ್ನು ಹಸಿರು ಬರ ಎಂದು ಕರೆಯಲಾಗಿತ್ತು. ಬೆಳೆಯೇನೋ ಬೆಳೆದಿತ್ತು. ಆದರೆ ಸಕಾಲದಲ್ಲಿ ಮಳೆಯಾಗದೆ ರೈತನಿಗೆ ಏನೂ ಸಿಗಲಿಲ್ಲ ಎಂದರು.
ಮಳೆಯಾಗಲಿಲ್ಲವೆಂದು ಗ್ರಾಮಗಳನ್ನು ಬಿಟ್ಟು ಗುಳೆ ಹೋಗುವವರ ಪ್ರಮಾಣ ಹೆಚ್ಚಾಗುತ್ತಿದೆ. ಗುಳೆ ಹೋಗುವುದನ್ನು ತಪ್ಪಿಸಲು ವಿಬಿ ಜಿ ರಾಮ್ ಜಿ ಯೋಜನೆಯಡಿ ಉದ್ಯೋಗ ದೊರೆಯುವಂತೆ ಮಾಡಿ. ಮುಖ್ಯವಾಗಿ ಕಲ್ಯಾಣ ಕರ್ನಾಟಕದ ಗ್ರಾಮಗಳಲ್ಲಿ ಗುಳೆ ಸಮಸ್ಯೆ ತೀವ್ರವಾಗಿದೆ ಎಂಬುದು ನಿಮ್ಮ ಗಮನದಲ್ಲಿರಲಿ. ಸಾವಿರಾರು ಮಕ್ಕಳು ಶಾಲೆಗೆ ಹೋಗದೆ ವಲಸೆ ಹೋಗುತ್ತಿದ್ದಾರೆಂದು ಪತ್ರಿಕೆಗಳು ವರದಿ ಮಾಡುತ್ತಿವೆ. ಈ ಕುರಿತು ನಿಗಾ ವಹಿಸಿ ಎಂದು ಹೇಳಿದರು.
ರಾಜ್ಯದ ಯಾವ ಜಿಲ್ಲೆಗಳಲ್ಲಿ ವಲಸೆ ಪ್ರಮಾಣ ಹೆಚ್ಚಿದೆಯೋ ಆ ಜಿಲ್ಲೆಗಳಲ್ಲಿ ನೀವು ಸಮರೋಪಾದಿಯಲ್ಲಿ ಉದ್ಯೋಗಗಳನ್ನು ನೀಡಬೇಕು. ಹಲವು ಜಿಲ್ಲೆಗಳಲ್ಲಿ ಉದ್ಯೋಗ ನೀಡುವ ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಸರ್ಕಾರ ನಿಮ್ಮನ್ನು ಕ್ಷಮಿಸುವುದಿಲ್ಲ, ಜನರೂ ಕ್ಷಮಿಸುವುದಿಲ್ಲ ಎಂದು ಹೇಳಿದರು.
ಜಾನುವಾರುಗಳ ಮೇವಿನ ಬಗ್ಗೆಯೂ ಗಮನ ಹರಿಸಿ, ಮೇವು ಖರೀದಿಸಲು ಸಾಧ್ಯವಾಗದಷ್ಟು ಪರಿಸ್ಥಿತಿ ಹದಗೆಡಬಹುದು. ಇಡೀ ದಕ್ಷಿಣ ಭಾರತದಲ್ಲಿ ಎಲ್ಲಿಯೂ ಮೇವು ಸಿಗದೇ ಹೋಗಬಹುದು. ಏಕೆಂದರೆ ಎಲ್ಲಾ ಕಡೆಯೂ ಅಭಾವವಿದೆ. ಅಕ್ಕಪಕ್ಕದ ರಾಜ್ಯಗಳಿಂದಲೂ ಮೇವು ಖರೀದಿಸಲು ಸಾಧ್ಯವಾಗದೇ ಹೋಗಬಹುದು ಎಂಬ ಆತಂಕ ವ್ಯಕ್ತಪಡಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಯಾವ ರೀತಿ ಮೇವು ಬೆಳೆಯಲು ಆಸಕ್ತಿ ತೋರುತ್ತಾರೋ ಅಂತಹ ರೈತರಿಗೆ ಪ್ರೋತ್ಸಾಹ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಳೆಯಾಗಿರುವ ಕಡೆ ಬಿತ್ತನೆ ಬೀಜ ಮತ್ತು ಗೊಬ್ಬರಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರವೇ ಶೇ. ೮೦ ರಷ್ಟು ಬಿತ್ತನೆಯಾಗುವ ಕಡೆ ಶೇ. ೫೨ ರಷ್ಟು ಬಿತ್ತನೆಯಾಗಿದೆ. ತೋಟಗಾರಿಕಾ ಬೆಳೆಗಳು ಶೇ. ೪.೩೬ ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಬೇಕಾದ ಕಡೆ ಕೇವಲ ಶೇ. ೧.೫೩ ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿದೆ. ಮುಸುಕಿನ ಜೋಳ, ಕಬ್ಬು, ಅಡಿಕೆ ಈ ನಾಲ್ಕು ಬೆಳೆಗಳು ಹೆಚ್ಚಿನ ನೀರನ್ನು ಬೇಡುತ್ತವೆ. ಹೆಚ್ಚು ಒತ್ತಡ ಕೂಡ ಈ ಬೆಳೆ ಬೆಳೆಯುವ ರೈತರದ್ದೇ ಆಗಿರುತ್ತದೆ. ಈ ಕುರಿತು ನೀವು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು ಮತ್ತು ಎಚ್ಚರವಹಿಸಬೇಕು. ಅಣೆಕಟ್ಟೆಗಳಿಂದ ನೀರು ಹರಿಸುವಂತೆ ಒತ್ತಾಯಗಳು ಬರುತ್ತವೆ. ಆದರೆ ಮುಂದಿನ ಜೂನ್ ವರೆಗೂ ಕುಡಿಯುವ ನೀರನ್ನು ಕಾಪಾಡಿಕೊಳ್ಳೇಬೇಕಾದ ಅನಿವಾರ್ಯತೆ ನಿಮ್ಮ ಮೇಲಿರುತ್ತದೆ ಎಂಬುದನ್ನು ಮರೆಯಬೇಡಿ ಎಂದು ಅಧಿಕಾರಿಗಳಿಗೆ ಹೇಳಿದರು.
ಈಗ ಉದ್ಭವಿಸಿರುವ ಎಲ್‌ನಿನೋ ಮುಂದಿನ ವರ್ಷದ ಏಪ್ರಿಲ್ ವರೆಗೂ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜು ಮಾಡುತ್ತಿದೆ. ಅಕ್ಟೋಬರ್ ಮತ್ತು ಸೆಪ್ಟೆಂಬರ್ ನಡುವೆ ಬಹಳ ಬಲಿಷ್ಠವಾಗ ಎಲ್‌ನಿನೋ ಪರಿಸ್ಥಿತಿ ಉದ್ಭವಿಸಬಹುದು ಎಂದು ಅಂದಾಜಿಸಲಾಗಿದೆ. ಪ್ರತಿ ಮೂರು ವರ್ಷಗಳಿಗೆ ಎಲ್‌ನಿನೋ ಬರುತ್ತಿದೆ. ಜಾಗತಿಕ ತಾಪಮಾನವೂ ಹೆಚ್ಚಾಗುತ್ತಿದೆ. ಎಲ್ಲವನ್ನು ಎದುರಿಸಲು ಸಜ್ಜಾಗಿ ಎಂದು ಹೇಳಿದರು.
ಕಳೆದ ಒಂದೂವರೆ ತಿಂಗಳಲ್ಲಿ ನಿಮ್ಮೊಂದಿಗೆ ಹಲವಾರು ಬಾರಿ ಸಭೆಗಳನ್ನು ನಡೆಸಿದ್ದೇನೆ. ಸ್ವತಃ ನಾನೇ ಬೆಳೆಗಾವಿ ವಿಭಾಗ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಸಭೆ ನಡೆಸಿದ್ದೇನೆ ಎಂದರು.


































