
ಕಲಬುರಗಿ :ಜೂ.27: ಬಂಕೀಮ್ ಚಂದ್ರ ಚಟರ್ಜಿಯವರು ಆಧುನಿಕ ಭಾರತೀಯ ಸಾಹಿತ್ಯದ ಪಿತಾಮಹ ಹಾಗೂ ಸ್ವಾತಂತ್ರ್ಯ ಹೋರಾಟದ ಪ್ರಮುಖ ರೂವಾರಿ. ಕನ್ನಡ ಸಾಹಿತ್ಯ ಮತ್ತು ಸಂಸ್ಕøತಿಯ ಮೇಲೆ ಇವರ ಪ್ರಭಾವ ಬೀರಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು. ನಗರದ ಖಾದ್ರಿ ಚೌಕ್ ನಲ್ಲಿನ ‘ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ “ಬಂಕೀಮ್ ಚಂದ್ರ ಚಟರ್ಜಿಯವರ 188ನೇ ಜನ್ಮದಿನಾಚರಣೆ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಚಟರ್ಜಿಯವರು ‘ವಂದೇ ಮಾತರಂ’ ಗೀತೆಯು ಭಾರತದ ಸ್ವಾತಂತ್ರ್ಯ ಹೋರಾಟದ ಮಹತ್ವದ ಮಂತ್ರವಾಯಿತು. ಮುಂದೆ ಇದು ಭಾರತದ ರಾಷ್ಟ್ರೀಯ ಗೀತೆಯಾಗಿ ಘೋಷಿಸಲ್ಪಟ್ಟಿತು. ಕನ್ನಡನಾಡಿನಾದ್ಯಂತ ಈ ಗೀತೆಯ ಭಾವಾನುವಾದಗಳು ಲಕ್ಷಾಂತರ ಜನರಲ್ಲಿ ದೇಶಭಕ್ತಿಯ ಕಿಚ್ಚನ್ನು ಹೊತ್ತಿಸಿವೆ. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಕನ್ನಡದ ಕವಿಗಳು ಮತ್ತು ಹೋರಾಟಗಾರರು ಇದನ್ನು ಮುಕ್ತವಾಗಿ ಹಾಡಿ ಜನರನ್ನು ಜಾಗೃತಗೊಳಿಸಿದರು ಎಂದರು.
ಬ್ರಿಟಿಷರ ಕಾಲದಲ್ಲಿ ಸನ್ಯಾಸಿ ದಂಗೆಯನ್ನು ಆಧರಿಸಿ ರಚಿತವಾದ ‘ಆನಂದಮಠ’ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಲಾಗಿದೆ. ಇವರ ಬಂಗಾಳಿ ಗದ್ಯ ಶೈಲಿ ಮತ್ತು ಸಾಮಾಜಿಕ ಕಾದಂಬರಿಗಳನ್ನು ಬರೆಯುವ ವಿಧಾನವನ್ನು ಕನ್ನಡದ ನವೋದಯ ಕಾಲದ ಲೇಖಕರು ಸ್ಫೂರ್ತಿಯಾಗಿ ತೆಗೆದುಕೊಂಡರು. ‘ದೇವಿ’, ‘ಚೌಧುರಾಣಿ’ ಮುಂತಾದ ಕೃತಿಗಳಲ್ಲಿ ಕಂಡುಬರುವ ದಿಟ್ಟ ಮಹಿಳಾ ಪಾತ್ರಗಳು ಮತ್ತು ಸಾಮಾಜಿಕ ಕಳಕಳಿ ಕನ್ನಡದ ಸಾಹಿತಿಗಳಿಗೂ ಹೊಸ ಆಯಾಮವನ್ನು ನೀಡಿತು. ಇವರ ಬರಹಗಳು ಕೇವಲ ಮನರಂಜನೆಯಾಗಿರದೆ, ಭಾರತೀಯರ ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಮತ್ತು ವೈಚಾರಿಕತೆಗೆ ಬುನಾದಿಯಾಗಿವೆ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಿಬ್ಬಂದಿ ಪೂಜಾ ಹೂಗಾರ, ಕಾವೇರಿ ಹೌದೆ, ಸ್ನೇಹಾ ಚೌಹಾಣ, ಮುಸ್ಕಾನ್ ಶೇಖ್, ರುಕ್ಸಾನಾ ಪಟೇಲ್ ಹಾಗೂ ವಿದ್ಯಾರ್ಥಿಗಳು ಇದ್ದರು.




















