Home ಜಿಲ್ಲೆ ಅಧಿಕಾರ ಸ್ವೀಕಾರ

ಅಧಿಕಾರ ಸ್ವೀಕಾರ

ಗದಗ, ಜು೧೨: ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಶ್ರೀ ತಾವರಚಂದ್ ಗೆಹ್ಲೋಟ್ ಅವರು ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗದ ಕುಲಪತಿಯಾಗಿ ಪ್ರೊ. ಡಾ. ಸುರೇಶ್ ವಿ. ನಾಡಗೌಡರ ಅವರನ್ನು ನೇಮಕಗೊಳಿಸಿದ್ದು, ಅವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಈ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಸಚಿವರಾಗಿ ಹಾಗೂ ಪ್ರಭಾರ ಕುಲಪತಿಯಾಗಿ ಸೇವೆ ಸಲ್ಲಿಸಿರುವ ಅನುಭವದಿಂದ ವಿಶ್ವವಿದ್ಯಾಲಯದ ಧ್ಯೇಯ, ದೃಷ್ಟಿಕೋನ, ಮೌಲ್ಯಗಳು ಹಾಗೂ ಭವಿಷ್ಯದ ಆಶಯಗಳ ಬಗ್ಗೆ ಅವರಿಗೆ ಆಳವಾದ ಅರಿವು ಮತ್ತು ಬದ್ಧತೆ ಇದೆ. ವಿಶ್ವವಿದ್ಯಾಲಯವನ್ನು ಶೈಕ್ಷಣಿಕ ಶ್ರೇಷ್ಠತೆ, ಗುಣಮಟ್ಟದ ಸಂಶೋಧನೆ, ನವೋದ್ಯಮ, ವಿಸ್ತರಣಾ ಚಟುವಟಿಕೆಗಳು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟçಮಟ್ಟದ ಆದರ್ಶ ಸಂಸ್ಥೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಎಲ್ಲಾ ಹಿತಾಸಕ್ತಿಪಕ್ಷಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುವ ಸಂಕಲ್ಪವನ್ನು ಅವರು ವ್ಯಕ್ತಪಡಿಸಿದರು.

ಪ್ರೊ. ಡಾ. ಸುರೇಶ್ ವಿ. ನಾಡಗೌಡರ ಅವರು ಕಾನೂನು ಶಿಕ್ಷಣ ಕ್ಷೇತ್ರದ ಹಿರಿಯ ಪ್ರಾಧ್ಯಾಪಕರಾಗಿದ್ದು, ಬೋಧನೆ, ಸಂಶೋಧನೆ, ಶೈಕ್ಷಣಿಕ ಆಡಳಿತ ಮತ್ತು ಸಂಸ್ಥಾ ನಿರ್ಮಾಣ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆಗಳನ್ನು ನೀಡಿದ್ದಾರೆ. ರಾಜ್ಯದ ಅನೇಕ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಹಾಗೂ ಶೈಕ್ಷಣಿಕ ಮಂಡಳಿಗಳ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಅವರು, ಕರ್ನಾಟಕ ಕಾನೂನು ಆಯೋಗದ ಸದಸ್ಯರಾಗಿ ಹಾಗೂ ಇತರ ಅನೇಕ ಪ್ರತಿಷ್ಠಿತ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಉನ್ನತ ಶಿಕ್ಷಣ ಮತ್ತು ಶೈಕ್ಷಣಿಕ ಆಡಳಿತಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ.