Home ಜಿಲ್ಲೆ ಅಕ್ರಮ ಕ್ಲಿನಿಕ್‍ಗಳಿಗೆ ಅಧಿಕಾರಿಗಳ ಅಭಯಹಸ್ತವೇ? ಕ್ರಮ ಜರುಗಿಸದ ಟಿಎಚ್‍ಒ ವಿರುದ್ಧ ಜಿಲ್ಲಾಡಳಿತಕ್ಕೆ ದೂರು

ಅಕ್ರಮ ಕ್ಲಿನಿಕ್‍ಗಳಿಗೆ ಅಧಿಕಾರಿಗಳ ಅಭಯಹಸ್ತವೇ? ಕ್ರಮ ಜರುಗಿಸದ ಟಿಎಚ್‍ಒ ವಿರುದ್ಧ ಜಿಲ್ಲಾಡಳಿತಕ್ಕೆ ದೂರು

ಯಾದಗಿರಿ: ಶಹಾಪುರ ನಗರದಲ್ಲಿ ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಕ್ಲಿನಿಕ್‍ಗಳು ಹಾಗೂ ಅರ್ಹತೆ ಇಲ್ಲದ ವ್ಯಕ್ತಿಗಳಿಂದ ನಡೆಯುತ್ತಿರುವ ವೈದ್ಯಕೀಯ ಚಟುವಟಿಕೆಗಳ ವಿರುದ್ಧ ನಿರಂತರವಾಗಿ ದೂರುಗಳು ಸಲ್ಲಿಕೆಯಾಗುತ್ತಿದ್ದರೂ, ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಈ ಹಿನ್ನೆಲೆದಲ್ಲಿ ತಾಲೂಕು ಆರೋಗ್ಯಾಧಿಕಾರಿ (ಟಿಎಚ್‍ಒ) ಅವರ ಕರ್ತವ್ಯ ಲೋಪ ಮತ್ತು ಆಡಳಿತಾತ್ಮಕ ವೈಫಲ್ಯವನ್ನು ಪ್ರಶ್ನಿಸಿ ನಮ್ಮ ಕರ್ನಾಟಕ ಸೇನೆ ತಾಲೂಕು ಘಟಕದ ಅಧ್ಯಕ್ಷ ಸಿದ್ದು ಪಟ್ಟೇದಾರ್ ಅವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸಮಗ್ರ ಲಿಖಿತ ದೂರು ಸಲ್ಲಿಸಿ ತಕ್ಷಣದ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಮನವಿಯಲ್ಲಿ, ಶಹಾಪುರ ನಗರದಲ್ಲಿ ಕಾನೂನು ಉಲ್ಲಂಘಿಸಿ ಹಲವಾರು ಕ್ಲಿನಿಕ್‍ಗಳು ಕಾರ್ಯನಿರ್ವಹಿಸುತ್ತಿದ್ದು, ಸೂಕ್ತ ವೈದ್ಯಕೀಯ ಅರ್ಹತೆ ಇಲ್ಲದವರೇ ಸಾರ್ವಜನಿಕರಿಗೆ ಚಿಕಿತ್ಸೆ ನೀಡುತ್ತಿರುವ ಗಂಭೀರ ಆರೋಪ ಮಾಡಲಾಗಿದೆ. ಇಂತಹ ಅಕ್ರಮ ಚಟುವಟಿಕೆಗಳ ಕುರಿತು ಹಲವು ಬಾರಿ ದಾಖಲೆಗಳೊಂದಿಗೆ ದೂರು ಸಲ್ಲಿಸಿದರೂ, ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುವುದಕ್ಕೂ ಮುಂದಾಗದೆ ಮೌನ ವಹಿಸಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಕ್ರಮ ವೈದ್ಯಕೀಯ ಸೇವೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳೇ ಜಾಣ ಮೌನಕ್ಕೆ ಶರಣಾಗಿರುವುದರಿಂದ ನಿಯಮ ಉಲ್ಲಂಘಿಸುವವರಿಗೆ ಪರೋಕ್ಷ ರಕ್ಷಣೆ ದೊರೆಯುತ್ತಿರುವಂತಾಗಿದೆ. ಇದರ ಪರಿಣಾಮವಾಗಿ ಅಮಾಯಕ ಸಾರ್ವಜನಿಕರ ಆರೋಗ್ಯ ಮತ್ತು ಜೀವ ಭದ್ರತೆ ಗಂಭೀರ ಅಪಾಯಕ್ಕೆ ಸಿಲುಕಿದೆ ಎಂದು ಸಿದ್ದು ಪಟ್ಟೇದಾರ್ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ತಾಲೂಕು ಆರೋಗ್ಯಾಧಿಕಾರಿಯನ್ನು ಸಂಪರ್ಕಿಸಿದಾಗ, ಮೇಲಧಿಕಾರಿಗಳ ಅನುಮತಿ ಹಾಗೂ ನಿರ್ದೇಶನ ಬಂದ ನಂತರವೇ ಕ್ರಮ ಜರುಗಿಸಲಾಗುವುದು ಎಂದು ಉತ್ತರ ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಆದರೆ ಈ ರೀತಿಯ ಸ್ಪಂದನೆ ಅಧಿಕಾರಿಗಳ ಜವಾಬ್ದಾರಿಯುತ ಆಡಳಿತಕ್ಕೆ ವಿರುದ್ಧವಾಗಿದ್ದು, ಅಕ್ರಮ ವೈದ್ಯಕೀಯ ವ್ಯವಸ್ಥೆಗೆ ಉತ್ತೇಜನ ನೀಡಿದಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟ ನಡೆಸುತ್ತಿರುವ ಅಕ್ರಮ ಕ್ಲಿನಿಕ್‍ಗಳನ್ನು ತಕ್ಷಣ ಮುಚ್ಚಿಸಿ, ನಕಲಿ ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಜೊತೆಗೆ ಕರ್ತವ್ಯ ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳ ಪಾತ್ರದ ಬಗ್ಗೆಯೂ ಉನ್ನತ ಮಟ್ಟದ ತನಿಖೆ ನಡೆಸಿ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತವನ್ನು ಅವರು ಒತ್ತಾಯಿಸಿದ್ದಾರೆ.

ಆರೋಗ್ಯ ಇಲಾಖೆಯ ನಿರ್ಲಕ್ಷ್ಯ ಮುಂದುವರಿದಲ್ಲಿ ಜನಪರ ಸಂಘಟನೆಗಳೊಂದಿಗೆ ಹಂತ ಹಂತವಾಗಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಸಿದ್ದು ಪಟ್ಟೇದಾರ್ ಎಚ್ಚರಿಕೆ ನೀಡಿದ್ದಾರೆ