Home ಜಿಲ್ಲೆ ನಾಲ್ವಡಗಿ ತಾಂಡದಲ್ಲಿ ಮೂಲಸೌಕರ್ಯ ಕೊರತೆ ಆರೋಪ: ಖಾಲಿ ಕೊಡ ಹಿಡಿದು ಉಮೇಶ ಮುದ್ನಾಳ್ ಪ್ರತಿಭಟನೆ

ನಾಲ್ವಡಗಿ ತಾಂಡದಲ್ಲಿ ಮೂಲಸೌಕರ್ಯ ಕೊರತೆ ಆರೋಪ: ಖಾಲಿ ಕೊಡ ಹಿಡಿದು ಉಮೇಶ ಮುದ್ನಾಳ್ ಪ್ರತಿಭಟನೆ

ಯಾದಗಿರಿ: ಜು.೧೩:ವಡಗೇರಾ ತಾಲೂಕಿನ ನಾಲ್ವಡಗಿ ತಾಂಡದಲ್ಲಿ ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದು, ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಹಾಗೂ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ್ ಆರೋಪಿಸಿದರು.
ಭಾನುವಾರ ಬೆಳಿಗ್ಗೆ ತಾಂಡಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಉಮೇಶ ಕೆ. ಮುದ್ನಾಳ್, ಬಳಿಕ ಗ್ರಾಮಸ್ಥರು ಹಾಗೂ ಮಹಿಳೆಯರೊಂದಿಗೆ ಕೈಯಲ್ಲಿ ಖಾಲಿ ಕೊಡಗಳನ್ನು ಹಿಡಿದು ತಾಂಡದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಂಡದಲ್ಲಿ ಶುದ್ಧ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಇಲ್ಲದಿರುವುದು, ಚರಂಡಿ ಹಾಗೂ ಸಿಸಿ ರಸ್ತೆ ನಿರ್ಮಾಣವಾಗದಿರುವುದು, ತಗ್ಗು ಪ್ರದೇಶಗಳಲ್ಲಿ ಕಲುಷಿತ ನೀರು ನಿಂತಿರುವುದು ಮತ್ತು ಸ್ವಚ್ಛತೆ ಕೊರತೆಯಿಂದ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ ಎಂದು ಅವರು ಆರೋಪಿಸಿದರು.
ಹಾಳಾಗಿರುವ ಶುದ್ಧ ಕುಡಿಯುವ ನೀರಿನ ಘಟಕ, ಅಪಾಯಕಾರಿಯಾಗಿ ಜೋತುಬಿದ್ದಿರುವ ವಿದ್ಯುತ್ ತಂತಿಗಳು, ದುರಸ್ತಿಯಾಗದ ಮೂರು ಕೈಪಂಪುಗಳು, ಉದ್ಘಾಟನೆಗಾಗಿಯೇ ನಿಂತಿರುವ ಕುಡಿಯುವ ನೀರಿನ ಟ್ಯಾಂಕ್, ಸಮರ್ಪಕ ಪೈಪ್‌ಲೈನ್ ಕೊರತೆ, ಮಹಿಳೆಯರಿಗೆ ಶೌಚಾಲಯಗಳ ಅಭಾವ ಹಾಗೂ ಮುಖ್ಯ ರಸ್ತೆಯಿಂದ ತಾಂಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿರುವುದರಿಂದ ಸಾರ್ವಜನಿಕರು ಮತ್ತು ರೈತರು ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ತಾಂಡಾ ಅಭಿವೃದ್ಧಿಗೆ ಲಕ್ಷಾಂತರ ರೂಪಾಯಿ ಅನುದಾನ ಬಿಡುಗಡೆಯಾದರೂ ಅಭಿವೃದ್ಧಿ ಕಾಮಗಾರಿಗಳು ಕಾಣಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಸಂಬAಧಪಟ್ಟ ಅಧಿಕಾರಿಗಳು ೨೪ ಗಂಟೆಗಳೊಳಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಬೇಕು. ಇಲ್ಲದಿದ್ದರೆ ಯಾದಗಿರಿ-ಶಹಾಪುರ ಮುಖ್ಯ ರಸ್ತೆಯ ನಾಯ್ಕಲ್ ಸರ್ಕಲ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಪವನ್, ವಿಶಾಲ, ಗಂಗಾರಾಮ ಕಾರಬಾರಿ, ಹೀರು ನಾಯಕ, ಜಾಕ್ಯಾ, ಮೌನೇಶ, ಶಿವು, ಯೋಗರಾಜ, ಅಜಯ, ಕುಮಾರ, ಬಸವರಾಜ, ಈಶ್ವರ, ಕಿರಣ, ಮಹೇಶ, ಇಂದ್ರಪ್ಪ, ನಿರಾಜ್, ಆಕಾಶ, ರೆಡ್ಡಿ, ಅರ್ಜುನ, ವಿನೋದ, ಶೀಲಿಬಾಯಿ, ಲಕ್ಕಿಬಾಯಿ, ತಾರಿಬಾಯಿ, ನೀಳಿಬಾಯಿ, ಜ್ಯೋತಿಬಾಯಿ, ಸವಿತಾಬಾಯಿ, ಮುನ್ನಿಬಾಯಿ, ಜಲ್ಲಿಬಾಯಿ, ಶಾರಾಬಾಯಿ, ಸೀತಾಬಾಯಿ ಸೇರಿದಂತೆ ಅನೇಕ ಗ್ರಾಮಸ್ಥರು, ಯುವಕರು ಹಾಗೂ ಮಹಿಳೆಯರು ಭಾಗವಹಿಸಿದ್ದರು.