Home ಜಿಲ್ಲೆ ಅಧಿಕ ದರಕ್ಕೆ ರಸಗೊಬ್ಬರ ಮಾರಾಟ ಆರೋಪ; ಕೃಷಿ ಇಲಾಖೆಯಿಂದ ನೋಟಿಸ್

ಅಧಿಕ ದರಕ್ಕೆ ರಸಗೊಬ್ಬರ ಮಾರಾಟ ಆರೋಪ; ಕೃಷಿ ಇಲಾಖೆಯಿಂದ ನೋಟಿಸ್

ಯಾದಗಿರಿ :ಜು.1: ನಿಗದಿತ ಗರಿಷ್ಠ ಚಿಲ್ಲರೆ ದರ (ಎಂಆರ್‍ಪಿ)ಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಸೈದಾಪುರ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ಸ್‍ಗೆ ಕೃಷಿ ಇಲಾಖೆ ನೋಟಿಸ್ ಜಾರಿಗೊಳಿಸಿದೆ.

ಕರ್ನಾಟಕ ರಾಜ್ಯ ರೈತ ಸಂಘದ ಬಳಿಚಕ್ರ ಹೋಬಳಿ ಅಧ್ಯಕ್ಷ ಎಸ್.ಎಂ. ಹಣಮಂತ ನಾಯಕ ಅವರು ಸಲ್ಲಿಸಿದ ಲಿಖಿತ ದೂರಿನ ಆಧಾರದ ಮೇಲೆ ಕೃಷಿ ಇಲಾಖೆ ಈ ಕ್ರಮ ಕೈಗೊಂಡಿದೆ. ದೂರಿನಲ್ಲಿ ಜೂನ್ 27ರಂದು ಕೆಲವು ರಸಗೊಬ್ಬರಗಳನ್ನು ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗಿದೆ ಎಂದು ದಾಖಲೆಗಳೊಂದಿಗೆ ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸಂಬಂಧಿತ ಸಂಸ್ಥೆಗೆ ಎರಡು ದಿನಗಳೊಳಗೆ ಲಿಖಿತ ಸಮಜಾಯಿಷಿ ಸಲ್ಲಿಸುವಂತೆ ಕೃಷಿ ಇಲಾಖೆ ಸೂಚಿಸಿದ್ದು, ನಿಗದಿತ ಅವಧಿಯಲ್ಲಿ ಉತ್ತರ ಸಲ್ಲಿಸದಿದ್ದಲ್ಲಿ ಲಭ್ಯ ದಾಖಲೆಗಳ ಆಧಾರದ ಮೇಲೆ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್‍ನಲ್ಲಿ ತಿಳಿಸಲಾಗಿದೆ.

ಇದೇ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಂಟಿ ಕೃಷಿ ನಿರ್ದೇಶಕರಿಗೆ ಸಲ್ಲಿಸಿರುವ ಮತ್ತೊಂದು ಮನವಿಯಲ್ಲಿ, ಬಳಿಚಕ್ರ ಗ್ರಾಮದ ವಿಶ್ವರಾಧ್ಯ ಆಗ್ರೋ ಏಜೆನ್ಸಿ ಹಾಗೂ ಕಿಲ್ಲನಕೇರಾ ಗ್ರಾಮದ ಪಟೇಜರ್ ಅಂಗಡಿ ವಿರುದ್ಧ ಯೂರಿಯಾ ಗೊಬ್ಬರ ಕಳ್ಳಸಾಗಣೆ, ಕಳಪೆ ಗುಣಮಟ್ಟದ ಭತ್ತದ ಬೀಜಗಳ ಮಾರಾಟ ಮತ್ತು ಜಿಎಸ್‍ಟಿ ಬಿಲ್ ನೀಡದೆ ವ್ಯವಹಾರ ನಡೆಸುತ್ತಿರುವ ಆರೋಪಗಳನ್ನು ಮಾಡಲಾಗಿದೆ.

ಕೆಲವು ರೈತರು ಖರೀದಿಸಿದ ಭತ್ತದ ಬೀಜಗಳು ಸಮರ್ಪಕವಾಗಿ ಮೊಳಕೆಯೊಡೆಯದೆ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಸಂಬಂಧಿತ ಅಂಗಡಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಂಘಟನೆ ಆಗ್ರಹಿಸಿದೆ.

ಈ ಕುರಿತು ಸಂಬಂಧಿತ ವ್ಯಾಪಾರ ಸಂಸ್ಥೆಗಳ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ. ಕೃಷಿ ಇಲಾಖೆಯ ತನಿಖೆ ಪೂರ್ಣಗೊಂಡ ಬಳಿಕ ಆರೋಪಗಳ ಸತ್ಯಾಸತ್ಯತೆ ಸ್ಪಷ್ಟವಾಗುವ ನಿರೀಕ್ಷೆಯಿದೆ.

ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ಸಾಬಣ್ಣ ಬಳಿಚಕ್ರ ಹಾಗೂ ಮಲ್ಲಯ್ಯ ಬಳಿಚಕ್ರ ಉಪಸ್ಥಿತರಿದ್ದರು.