ಯಾದಗಿರಿ:ಜು.೧: ದೀರ್ಘಕಾಲದಿಂದ ಕುಡಿಯುವ ನೀರಿನ ಅಭಾವ ಹಾಗೂ ಅಸ್ವಚ್ಛತೆಯಿಂದ ಸಂಕಷ್ಟ ಅನುಭವಿಸುತ್ತಿದ್ದ ತಾಲೂಕಿನ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಂದಳ್ಳಿ ಗ್ರಾಮದ ಗೌರಿ ನಗರದ ನಿವಾಸಿಗಳ ಸಮಸ್ಯೆಗೆ ಜಿಲ್ಲಾಡಳಿತ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಸ್ಪಂದಿಸಿದ್ದು, ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತುರ್ತು ಹಾಗೂ ಶಾಶ್ವತ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ, ಚರಂಡಿಗಳ ಅಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಎದುರಾಗಿದ್ದ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರು ಖಾಲಿ ಕೊಡ ಹಿಡಿದು ವಿನೂತನ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಗೆ ಸ್ಪಂದಿಸಿದ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯ ನೇರ ಪರಿಶೀಲನೆ ನಡೆಸಿದರು.
ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮಲ್ಲಣ್ಣ ಸಂಕನೂರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾರಾಣಿ ಹಾಗೂ ಸಿಬ್ಬಂದಿ ಗ್ರಾಮದಲ್ಲಿ ಸಂಚರಿಸಿ ಕುಡಿಯುವ ನೀರು, ಚರಂಡಿ ವ್ಯವಸ್ಥೆ ಮತ್ತು ಸ್ವಚ್ಛತೆ ಕುರಿತು ಪರಿಶೀಲನೆ ನಡೆಸಿದರು. ತಕ್ಷಣವೇ ಚರಂಡಿಗಳ ಸ್ವಚ್ಛತೆ, ಬ್ಲೀಚಿಂಗ್ ಪೌಡರ್ ಸಿಂಪಡಣೆ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಸುಧಾರಿಸುವಂತೆ ಸಂಬAಧಿಸಿದ ಸಿಬ್ಬಂದಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದರು.
ಅಲ್ಲದೆ, ಗ್ರಾಮದ ಶಾಶ್ವತ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಹೊಸ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಅಗತ್ಯ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್, ಗ್ರಾಮಸ್ಥರ ಸಂಕಷ್ಟವನ್ನು ಮನಗಂಡು ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿರುವುದು ಸಂತಸದ ಸಂಗತಿ. ಪ್ರತಿಭಟನೆಯ ನಂತರ ಚರಂಡಿಗಳ ಸ್ವಚ್ಛತೆ, ಬ್ಲೀಚಿಂಗ್ ಪೌಡರ್ ಸಿಂಪಡಣೆ ಹಾಗೂ ತಾತ್ಕಾಲಿಕವಾಗಿ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಕಲ್ಪಿಸಿರುವುದಕ್ಕೆ ಸಾರ್ವಜನಿಕರ ಪರವಾಗಿ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಶಾಶ್ವತ ನೀರಿನ ಯೋಜನೆ ಕೂಡ ಶೀಘ್ರದಲ್ಲೇ ಜಾರಿಯಾಗಲಿ ಎಂಬುದು ಗ್ರಾಮಸ್ಥರ ನಿರೀಕ್ಷೆಯಾಗಿದೆ ಎಂದು ಹೇಳಿದರು.
ಸ್ಥಳ ಪರಿಶೀಲನೆ ವೇಳೆ ಮಾರುತಿ, ಬುಶಪ್ಪ, ಶರಣು, ಮಲ್ಲು, ಯಂಕಪ್ಪ, ಸಣ್ಣ ಮರೇಪ್ಪ, ಪವನ, ಭೀಮಾಶಂಕರ, ರಾಜಶೇಖರ ಸೇರಿದಂತೆ ಅನೇಕ ಗ್ರಾಮಸ್ಥರು ಹಾಗೂ ಮಹಿಳೆಯರು ಉಪಸ್ಥಿತರಿದ್ದು, ಗ್ರಾಮಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಶೀಘ್ರ ಒದಗಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.





























