
ಕಲಬುರಗಿ:ಜೂ.25: ಯಾವುದೇ ಮಹಿಳೆಯು ತನ್ನ ಪತಿ ಕಳೆದುಕೊಂಡು ವಿಧವೆಯಾಗಬೇಕು ಎಂದು ಎಂದಿಗೂ ಕೂಡಾ ಬಯಸುವುದಿಲ್ಲ. ಕಾರಣಾಂತರಗಳಿಂದ ಇದು ಜರುಗುತ್ತದೆ ಎಂಬ ನೈಜತೆಯನ್ನು ಗಮನದಲ್ಲಿಟ್ಟುಕೊಂಡು, ಸಮಾಜವು ಸಂಪ್ರದಾಯದ ನೆಪದಲ್ಲಿ ಆ ಮಹಿಳೆಯನ್ನು ಕೀಳಾಗಿ ಕಾಣುವುದು ಬೇಡ. ಇದರಿಂದ ವಿಧವಾ ತಾಯಿಯು ಮನೋಸ್ಥೈರ್ಯ ಕಳೆದುಕೊಂಡು ಸಾಕಷ್ಟು ನೋವುಗಳನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಅವರನ್ನು ಉತ್ತಮ ಮನೋಭಾವನೆಯಿಂದ ಗೌರವಿಸಿ, ನೆಮ್ಮದಿಯಿಂದ ಬದುಕಲು ಅನವು ಮಾಡಿಕೊಡುವುದು ಜವಾಬ್ದಾರಿಯುತ ಸಮಾಜದ ಆದ್ಯ ಕರ್ತವ್ಯವಾಗಿದೆ ಎಂದು ಉಪನ್ಯಾಸಕ, ಪ್ರಗತಿಪರ ಚಿಂತಕ ಎಚ್.ಬಿ.ಪಾಟೀಲ್ ಆಶಯ ವ್ಯಕ್ತಪಡಿಸಿದರು.
ನಗರದ ಸೈಯದ್ ಚಿಂಚೋಳಿ ರಸ್ತೆಯಲ್ಲಿರುವ ‘ಮಹಾದೇವಿ ತಾಯಿ ವೃದ್ಧಾಶ್ರಮ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ‘ಅಂತಾರಾಷ್ಟ್ರೀಯ ವಿಧವೆಯರ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ವೃದ್ಧಾಶ್ರಮದ ವಿಧವಾ ತಾಯಂದಿರಿಗೆ ಸತ್ಕರಸಿ, ಅವರು ಮಾತನಾಡುತ್ತಿದ್ದರು.
ಮಾನವ ಸಂಘ ಜೀವಿ. ಅವನ ಬದುಕಿನಲ್ಲಿ ಪರಿಸರ ಮತ್ತು ಅನೇಕ ವ್ಯಕ್ತಿಗಳ ಜೊತೆ ಸಂಬಂಧ ಹೊಂದಬೇಕಾದದ್ದು ಅಗತ್ಯವಾಗಿದೆ. ಅವನು ಕೆಲವು ನಂಬಿಕೆಗಳ ಮೇಲೆ ಜೀವನವನ್ನು ಸಾಗಿಸಬೇಕಾಗುತ್ತದೆ. ನಂಬಿಕೆಯಲ್ಲಿ ಸತ್ಯ, ವೈಜ್ಞಾನಿಕವಾಗಿದ್ದರೆ ಒಳ್ಳೆಯದು, ಆದರೆ ಕಂದಾಚಾರ, ಅಂದಶೃದ್ಧೆ, ಅವೈಜ್ಞಾನಿಕವಾದ ಮತ್ತು ಯಾವುದೇ ಆಧಾರ ರಹಿತವಾದ ನಂಬಿಕೆಗಳು ಮೂಢ ನಂಬಿಕೆಗಳಾಗುತ್ತವೆ. ನಂಬಿಕೆ ಇರಬೇಕೆ ವಿನಃ, ಮೂಡ ನಂಬಿಕೆಗಳಿರಬಾರದು. ವಿಧವೆಯರಿಗೆ ದೊರೆಯಬೇಕಾದ ಎಲ್ಲಾ ಸೌಲಭ್ಯಗಳು ಸೂಕ್ತವಾಗಿ ಸಿಗಬೇಕು. ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಧವಾ ತಾಯಂದಿರಾದ ಅನಂತಮ್ಮ, ಹೀರಾಬಾಯಿ, ಪಾರ್ವತಿ, ಮಹಾಂತಮ್ಮ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು. ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ವೃದ್ಧಾಶ್ರಮದ ಮೇಲ್ವಿಚಾರಕಿ ಬಸಮ್ಮ ಕೆ.ಸ್ಥಾವರಮಠ, ಸಿಬ್ಬಂದಿಗಳಾದ ಜಯಶ್ರೀ ಹಿರೇಮಠ, ಸುಧಾರಾಣಿ, ಸಂಗೀತಾ, ಪ್ರಮುಖರಾದ ಬಕ್ಕಮ್ಮ, ಚನ್ನಮ್ಮ, ಶಶಿಕಲಾ, ಸಿದ್ದಮ್ಮ, ಮಹಾನಂದ, ಶಂಕ್ರಮ್ಮ ಸೇರಿದಂತೆ ಇನ್ನಿತರರರಿದ್ದರು.




















