Home ಜಿಲ್ಲೆ ಬಿರುಗಾಳಿ ಮಳೆಗೆ ಪತ್ರಾ ಶೆಡ್ ಹಾರಿ 4 ಲಕ್ಷ ನಷ್ಟ

ಬಿರುಗಾಳಿ ಮಳೆಗೆ ಪತ್ರಾ ಶೆಡ್ ಹಾರಿ 4 ಲಕ್ಷ ನಷ್ಟ

ಜಮಖಂಡಿ, ಜೂ 16:ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ಬಿರುಗಾಳಿ ಸಮೇತ ಸುರಿದ ಭಾರೀ ಮಳೆಯಿಂದ ಚೌರಿ ತೋಟದ ವಸತಿ ನಿವಾಸಿ ಭೀಮಪ್ಪ ಬೀರಪ್ಪ ಹರನಾಳ ಅವರ ಪತ್ರಾ ಶೆಡ್ ಹಾರಿ ಹೋಗಿ ಸುಮಾರು ?4 ಲಕ್ಷ ಮೌಲ್ಯದ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಭಾರೀ ಗಾಳಿ ಮತ್ತು ಮಳೆಯ ಅಬ್ಬರಕ್ಕೆ ಪತ್ರಾ ಶೆಡ್‍ನ ಮೇಲ್ಛಾವಣಿ ಸಂಪೂರ್ಣವಾಗಿ ಕಿತ್ತು ಹೋಗಿದ್ದು, ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಹಾಗೂ ಇತರೆ ಸಾಮಗ್ರಿಗಳು ಹಾನಿಗೊಳಗಾಗಿವೆ. ಘಟನೆಯಿಂದ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದು, ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.
ಹಾನಿಗೊಳಗಾದ ನಿವಾಸಿ ಭೀಮಪ್ಪ ಬೀರಪ್ಪ ಹರನಾಳ ಮಾತನಾಡಿ, ಸಂಬಂಧಿಸಿದ ಕಂದಾಯ ಇಲಾಖೆ ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಬೇಕು. ಸರ್ಕಾರದಿಂದ ಸೂಕ್ತ ಪರಿಹಾರ ಹಾಗೂ ಅಗತ್ಯ ನೆರವು ಒದಗಿಸಬೇಕು ಎಂದು ಆಗ್ರಹಿಸಿದರು.
ಇನ್ನೋರ್ವ ನಿವಾಸಿ ಲಕ್ಷ್ಮಣ ಲಕ್ಕಪ್ಪ ಹರನಾಳ ಮಾತನಾಡಿ, ಬಿರುಗಾಳಿ ಮತ್ತು ಭಾರೀ ಮಳೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಹಾನಿ ಸಂಭವಿಸುತ್ತಿದ್ದು, ತಾಲೂಕು ಆಡಳಿತ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸಂತ್ರಸ್ತ ಕುಟುಂಬಕ್ಕೆ ಶೀಘ್ರ ಪರಿಹಾರ ಮಂಜೂರು ಮಾಡಿ ನೆರವಾಗಬೇಕು ಎಂದು ಒತ್ತಾಯಿಸಿದರು.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದ್ದು, ಸಂಬಂಧಿತ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.