Home ಮುಖಪುಟ ಸುದ್ದಿ ಸಿಇಸಿಗೆ ಮಾತ್ರವಲ್ಲ, ಇನ್ನಿಬ್ಬರು ಆಯುಕ್ತರಿಗೂ ಪ್ರಶ್ನೆಗಳ ಸುರಿ ಮಳೆ

ಸಿಇಸಿಗೆ ಮಾತ್ರವಲ್ಲ, ಇನ್ನಿಬ್ಬರು ಆಯುಕ್ತರಿಗೂ ಪ್ರಶ್ನೆಗಳ ಸುರಿ ಮಳೆ

ನವದೆಹಲಿ, ಸೆ.೨೫: ಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯಗಳ ಕುರಿತು ವರದಿಗಳು ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ನಿರ್ಧಾರಗಳ ಜತೆಗೆ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಅವರ ನಡೆ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.

ದಿ ಇಂಡಿಯನ್ ಎಕ್ಸ್‌ಪ್ರೆಸ್ ತನಿಖಾ ವರದಿ ಪ್ರಕಾರ, ಕಳೆದ ೧೦ ತಿಂಗಳಲ್ಲಿ ಇಬ್ಬರು ಆಯುಕ್ತರು ಮತದಾರರ ಪಟ್ಟಿ, ಹೊಸ ಮತದಾರರ ನೋಂದಣಿಯ ಫಾರ್ಮ್-೬, ಮತದಾರರ ದತ್ತಾಂಶಕ್ಕೆ ಪ್ರವೇಶ ಹಾಗೂ ಆಯೋಗದ ಐಟಿ ವ್ಯವಸ್ಥೆ ಸೇರಿದಂತೆ ಹಲವು ವಿಚಾರಗಳಲ್ಲಿ ಕನಿಷ್ಠ ೧೪ ಬಾರಿ ಆಕ್ಷೇಪ ದಾಖಲಿಸಿದ್ದಾರೆ. ಒಂದೇ ದಿನ ನಾಲ್ಕು ಬಾರಿ ಆಕ್ಷೇಪ ವ್ಯಕ್ತಪಡಿಸಿದ ಸಂದರ್ಭವೂ ಇತ್ತು ಎನ್ನಲಾಗಿದೆ.

ಮತದಾರರ ದತ್ತಾಂಶವನ್ನು ಕೇಂದ್ರೀಕೃತವಾಗಿ ನಿರ್ವಹಿಸುವುದರಿಂದ ಚುನಾವಣಾ ನೋಂದಣಿ ಅಧಿಕಾರಿಗಳ ಕಾನೂನುಬದ್ಧ ಅಧಿಕಾರಗಳಿಗೆ ಧಕ್ಕೆಯಾಗಬಹುದು ಎಂಬ ಆತಂಕವನ್ನು ಇಬ್ಬರೂ ವ್ಯಕ್ತಪಡಿಸಿದ್ದರು. ಫಾರ್ಮ್-೬ರ ಕೆಲವು ಬದಲಾವಣೆಗಳನ್ನು ಎಸ್‌ಐಆರ್ ಆದೇಶದ ಮೂಲಕ ಜಾರಿಗೆ ತರಲು ಸಾಧ್ಯವಿಲ್ಲ; ಅಗತ್ಯವಿದ್ದರೆ ಸಂಬಂಧಿತ ನಿಯಮಗಳಲ್ಲೇ ತಿದ್ದುಪಡಿ ಮಾಡಬೇಕು ಎಂದು ವಿವೇಕ್ ಜೋಶಿ ಅಭಿಪ್ರಾಯಪಟ್ಟಿದ್ದರು. ಸಂಧು ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದರು ಎಂದು ವರದಿ ತಿಳಿಸಿದೆ.ಆದರೆ, ಆಂತರಿಕ ಆಕ್ಷೇಪಗಳ ನಡುವೆಯೂ ಮೂವರು ಆಯುಕ್ತರು ಹಲವು ಜಂಟಿ ಕಾರ್ಯಕ್ರಮಗಳು ಹಾಗೂ ಮಾಧ್ಯಮಗೋಷ್ಠಿಗಳಲ್ಲಿ ಭಾಗವಹಿಸಿದ್ದರು. ೨೦೨೫ರ ಅಕ್ಟೋಬರ್‌ನಿಂದ ೨೦೨೬ರ ಆಗಸ್ಟ್‌ವರೆಗೆ ಕನಿಷ್ಠ ಐದು ಪ್ರಮುಖ ಜಂಟಿ ಬ್ರೀಫಿಂಗ್‌ಗಳಲ್ಲಿ ಮೂವರು ಹಾಜರಾಗಿದ್ದರು ಎನ್ನಲಾಗಿದೆ. ತಮ್ಮ ಆಕ್ಷೇಪಗಳನ್ನು ಸಾರ್ವಜನಿಕವಾಗಿ ಏಕೆ ಪ್ರಸ್ತಾಪಿಸಲಿಲ್ಲ ಎಂಬ ಪ್ರಶ್ನೆಯೂ ಈಗ ಮುನ್ನೆಲೆಗೆ ಬಂದಿದೆ.

ಇಬ್ಬರು ಆಯುಕ್ತರು ಕೆಲವು ವಿಚಾರಗಳಲ್ಲಿ ಕೇಂದ್ರ ಸರ್ಕಾರದ ಕ್ಯಾಬಿನೆಟ್ ಕಾರ್ಯದರ್ಶಿಗೂ ಪತ್ರ ಬರೆದಿದ್ದರು ಎನ್ನಲಾಗಿದೆ. ಚುನಾವಣಾ ಆಯೋಗ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿರುವ ಹಿನ್ನೆಲೆಯಲ್ಲಿ, ತಮ್ಮ ಆಕ್ಷೇಪಗಳನ್ನು ಆಯೋಗದ ಅಧಿಕೃತ ವ್ಯವಸ್ಥೆಯ ಮೂಲಕ ಅಥವಾ ರಾಷ್ಟ್ರಪತಿಗೆ ಏಕೆ ಮುಂದುವರಿಸಲಿಲ್ಲ ಎಂಬ ಪ್ರಶ್ನೆಯೂ ಚರ್ಚೆಯಲ್ಲಿದೆ.

ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದೇ ರಾಜೀನಾಮೆಗೆ ಕಾರಣವಾಗಬೇಕೆಂದಿಲ್ಲ. ಆದರೆ, ತಮ್ಮ ಆಕ್ಷೇಪಗಳನ್ನು ನಿರಂತರವಾಗಿ ನಿರ್ಲಕ್ಷಿಸಲಾಗುತ್ತಿದೆ ಅಥವಾ ಆಯೋಗದ ನಿರ್ಧಾರ ಪ್ರಕ್ರಿಯೆ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ಇಬ್ಬರೂ ಭಾವಿಸಿದ್ದರೆ, ಮುಂದಿನ ಸಾಂವಿಧಾನಿಕ ಅಥವಾ ಆಡಳಿತಾತ್ಮಕ ಕ್ರಮಗಳನ್ನು ಏಕೆ ಕೈಗೊಳ್ಳಲಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ.

ಈ ಪ್ರಶ್ನೆಗಳು ಸಿಇಸಿ ಜ್ಞಾನೇಶ್ ಕುಮಾರ್ ಅವರ ಮೇಲಿನ ಹೊಣೆಗಾರಿಕೆಯನ್ನು ಕಡಿಮೆ ಮಾಡುವುದಿಲ್ಲ. ಬದಲಾಗಿ, ಮೂವರು ಆಯುಕ್ತರ ಪಾತ್ರ, ಆಂತರಿಕ ನಿರ್ಧಾರ ಪ್ರಕ್ರಿಯೆ ಹಾಗೂ ಭಿನ್ನಾಭಿಪ್ರಾಯಗಳನ್ನು ಹೇಗೆ ದಾಖಲಿಸಿ ಪರಿಹರಿಸಲಾಯಿತು ಎಂಬ ಬಗ್ಗೆ ಹೆಚ್ಚಿನ ಸ್ಪಷ್ಟತೆ ಅಗತ್ಯವಿದೆ ಎಂಬ ಚರ್ಚೆಗೆ ಕಾರಣವಾಗಿವೆ.

೧೦ ತಿಂಗಳಲ್ಲಿ ಕನಿಷ್ಠ ೧೪ ಆಕ್ಷೇಪಗಳು.
ಫಾರ್ಮ್-೬, ಮತದಾರರ ಪಟ್ಟಿ ಮತ್ತು ದತ್ತಾಂಶ ಕೇಂದ್ರೀಕರಣದ ಬಗ್ಗೆ ಭಿನ್ನಾಭಿಪ್ರಾಯ.
ಇಖಔಗಳ ಕಾನೂನುಬದ್ಧ ಅಧಿಕಾರದ ಬಗ್ಗೆ ಆತಂಕ.
ಆಂತರಿಕ ಭಿನ್ನಾಭಿಪ್ರಾಯಗಳ ನಡುವೆಯೂ ಜಂಟಿ ಮಾಧ್ಯಮಗೋಷ್ಠಿಗಳಲ್ಲಿ ಭಾಗವಹಿಸಿದ್ದರು.
ಕೆಲವು ಆಕ್ಷೇಪಗಳ ಕುರಿತು ಕ್ಯಾಬಿನೆಟ್ ಕಾರ್ಯದರ್ಶಿಗೂ ಪತ್ರ.
ಅಂತಿಮ ನಿರ್ಧಾರದಲ್ಲಿ ಬಹುಮತದ ಅಭಿಪ್ರಾಯ ಮತ್ತು ಕಾನೂನು ಆಧಾರದ ಬಗ್ಗೆ ಸ್ಪಷ್ಟತೆ ಅಗತ್ಯ.