
ಕೋಲಾರ, ನ. ೨೦- ಗಾಂಧಿ ಕೃಷಿ ವಿಶ್ವವಿದ್ಯಾನಿಲಯದಲ್ಲಿ ನಡೆದ ಕೃಷಿಮೇಳದ ಉದ್ಘಾಟನಾ ಸಮಾರಂಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕುರಟಹಳ್ಳಿ ರಾಧಾಕೃಷ್ಣರವರ ಕೃಷಿ ಸಾಧನೆಗಾಗಿ ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಕ್ಯಾನ್ ಬ್ಯಾಂಕ್ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ ನೀಡಿ ಗೌರವಿಸಿದರು.
ಈ ವೇಳೆ ಕೇಂದ್ರ ಸೂಕ್ಷ್ಮ ಮತ್ತು ಮಧ್ಯಮ ಉದ್ಯಮಗಳ ಸಚಿವೆ ಶೋಭ ಕರಂದ್ಲಾಜೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಚಿವ ಕೃಷ್ಣಬೈರೇಗೌಡ, ಶಾಸಕರಾದ ಎಸ್.ಆರ್. ವಿಶ್ವನಾಥ್, ಸುದಾಮ್ದಾಸ್, ಕುಲಪತಿ ಡಾ.ಪಿ. ವೆಂಕಟರವಣ, ಕೃಷಿ ಇಲಾಖೆ ಕಾರ್ಯದರ್ಶಿ ಡಾ. ತ್ರಿಲೋಕಚಂದ್ರ ಉಪಸ್ಥಿತರಿದ್ದರು.
ರಾಧಾಕೃಷ್ಣರ ಪರಿಚಯ:
ಚಿಂತಾಮಣಿ ತಾಲ್ಲೂಕಿನ ಕುರಟಹಳ್ಳಿ ಗ್ರಾಮದ ಜೀಮನಪಲ್ಲಿ ರಾಮಪ್ಪ ಮತ್ತು ರಾಮಕ್ಕ ಅವರ ೩ನೇ ಮಗ ಸಿ.ಆರ್. ರಾಧಾಕೃಷ್ಣ ೧೯೭೮ರಲ್ಲಿ ಬಿ.ಎಸ್ಸಿ ಪದವೀಧರರು. ಮೂವರು ಸಹೋದರರೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇವರ ಮೂಲ ಕಸಬು ಕುರಿ ಮತ್ತು ಹಂದಿ ಸಾಕಾಣಿಕೆ. ಮೊದಲಿಗೆ ಎರಡು ಎಕರೆಯಲ್ಲಿ ಆರಂಭಗೊಂಡ ಇವರ ಕೃಷಿ ಜೀವನ ಇಂದು ೫೦ ಎಕರೆಯವರೆಗೂ ವಿಸ್ತರಿಸಿರುವುದು ಒಂದು ಯಶೋಗಾಥೆ ಮತ್ತು ಸಾಹಸಮಯ ಕೃಷಿ ಬದುಕು.
ತಂದೆಯ ಪ್ರೇರಣೆಯಿಂದ ಕೃಷಿಯಲ್ಲಿ ತೊಡಗಿಸಿಕೊಂಡಿರುವ ೨೦ ಸದಸ್ಯರ ಅವಿಭಕ್ತ ಕುಟುಂಬ ಇಡೀ ತಾಲೂಕಿನಲ್ಲಿ ಮಾದರಿ ಕೃಷಿ ಕುಟುಂಬವಾಗಿದೆ. ಶ್ರೀಗಂಧ, ಸಾಗವಾನ, ತೆಂಗು, ಸೀಬೆ, ನುಗ್ಗೆ, ಮಾವು, ಹಲಸು, ಜಂಬು, ನೇರಳೆ, ಹುಣಸೆ ಬೆಳೆದು ಪ್ರಗತಿಪರ ರೈತ ಎಂದು ಗುರುತಿಸಿಕೊಂಡಿದ್ದಾರೆ.
ಸಂಪೂರ್ಣ ಸಾವಯವ ಕೃಷಿಗೆ ಅಳವಡಿಸಿ ತೋಟದಲ್ಲಿ ಮಿಶ್ರ ಬೆಳೆಯಾಗಿ ಅವರೆ, ಹುರಳಿ, ಅಲಸಂದೆ, ತೊಗರಿ ಬೆಳೆಯುತ್ತಿದ್ದಾರೆ. ಕುಟುಂಬಕ್ಕೆ ಬೇಕಾದ ತರಕಾರಿಗಳನ್ನು ಬೆಳೆದು ತುಂಡು ಭೂಮಿಯಲ್ಲಿ ಹಿಂಡು ಬೆಳೆ ಬೆಳೆದು ಸ್ವಾವಲಂಭಿ ಬದುಕನ್ನು ಕಟ್ಟಿಕೊಂಡಿದ್ದಾರೆ.
ಉಪಕಸುಬಗಳಾಗಿ ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆಯನ್ನು ವಾಣಿಜ್ಯೀಕರಣಗೊಳಿಸಿ ಮೂಲ ಆದಾಯ ಹೆಚ್ಚಿಸಿಕೊಳ್ಳಲು ಸಾಕಾಣಿಕೆಯ ಚಾವಣೆಯಲ್ಲಿ ಸೊಲಾರ್ ವಿದ್ಯುತ್ ಉತ್ಪಾದನೆ ಮಾಡಿ ವಾರ್ಷಿಕ ಆದಾಯ ಹೆಚ್ಚಿಸಿಕೊಂಡಿದ್ದಾರೆ. ಕೃಷಿ ಭೂಮಿಯಲ್ಲಿ ಸದಾ ಉತ್ತಮ ಪರಿಸರ ಮತ್ತು ಹಸರೀಕರಣ ಸೃಷ್ಟಿಸಿದ್ದಾರೆ.
ಇವರ ಕೃಷಿ ಸಾಧನೆಗಾಗಿ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ೨೦೧೬ರಲ್ಲಿ ಶ್ರೇಷ್ಟ ತೋಟಗಾರಿಕೆ ರೈತ ಪ್ರಶಸ್ತಿ, ೨೦೧೭ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸಿ. ಬೈರೇಗೌಡ ರಾಜ್ಯಮಟ್ಟದ ಅತ್ಯುತ್ತಮ ಪ್ರಶಸ್ತಿ, ೨೦೧೮ರಲ್ಲಿ ಕೇಂದ್ರ ಸರ್ಕಾರದ ಬೆಸ್ಟ್ ಶಿಫ್ ಪಾರ್ಮರ್ ರಾಷ್ಟ್ರೀಯ ಪ್ರಶಸ್ತಿ, ೨೦೧೯ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಅಲ್ಯೂಮಿನಿ ಅಸೋಸಿಯೇಷನ್ ಸಕಲವರ ರಾಮಯ್ಯರೆಡ್ಡಿ, ೨೦೨೪ರಲ್ಲಿ ಪ್ರೊ. ಜಿ.ಕೆ. ವಿರೇಶ್ ರಾಜ್ಯಮಟ್ಟದ ಪ್ರಶಸ್ತಿ, ೨೦೨೫ರಲ್ಲಿ ಮಾಜಿ ಪ್ರಧಾನಿ ದೇವೇಗೌಡ ರಾಜ್ಯಮಟ್ಟದ ಶ್ರೇಷ್ಟ ಕೃಷಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಈ ಎಲ್ಲಾ ಪ್ರಶಸ್ತಿಗಳು ಗೌರವಯುತವಾಗಿ ತಮ್ಮ ಕುಟುಂಬದ ಸದಸ್ಯರ ಪ್ರತಿ ಬೆವರಿನ ಹನಿಗಳಿಗೆ ಅರ್ಪಣೆ ಮಾಡುತ್ತೇನೆ ಎಂದು ರಾಧಾಕೃಷ್ಣ ಅವರು ತಮ್ಮ ಮನದಾಳದ ಮಾತುಗಳಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.























