
ಸಂಜೆವಾಣಿ ವಾರ್ತೆ
ಚಾಮರಾಜನಗರ, ನ.19- ಒಳ ಮೀಸಲಾತಿ ಅನುಷ್ಠಾನದಿಂದ ಪರಿಶಿಷ್ಟ ಜಾತಿ ಎಲ್ಲಾ 101 ಜಾತಿಗಳಿಗೆ ಯಾವುದೇ ರೀತಿ ಅನ್ಯಾಯವಾಗಲು ಬಿಡುವುದಿಲ್ಲ. ಪರಿಶಿಷ್ಟ ಜಾತಿಯ ಎ, ಬಿ. ಮತ್ತು ಸಿ ಪ್ರವರ್ಗಗಳ ಗೊಂದಲ ಮತ್ತು ಭಿನ್ನಾಪ್ರಾಯಗಳನ್ನು ಬದಿಗೊತ್ತಿ ಸಂಘಟಿತರಾಗಿ ಸಲವತ್ತುಗಳು ಪಡೆದುಕೊಳ್ಳಲು ಮುಂದಾಗಬೇಕು ಎಂದು ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ತಿಳಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಸಂಯುಕ್ತ ಸಮತಾ ವೇದಿಕೆ ಹಾಗೂ ಎಚ್.ಕೆ. ಕೃಷ್ಣಸ್ವಾಮಿ ಟ್ರಸ್ಟ್ ಸಹಯೋಗದಲ್ಲಿ ನಡೆದ ಒಳಮೀಸಲಾತಿಯಿಂದ ಪರಿಶಿಷ್ಟ ಜಾತಿಗಳ ಎ,ಬಿ,ಸಿ ಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಚಿಂತನಾ ಮಂಥನ ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಡಾ.ಬಿ.ಆರ್. ಅಂಭೇಡ್ಕರ್ ಅವರು ಸಂವಿಧಾನದಲ್ಲಿ ದೇಶದ ಎಲ್ಲರಿಗೂ ಮೀಸಲಾತಿ ದೊರೆಯುತ್ತಿದೆ. ಇದನ್ನು ಸಮಾನವಾಗಿ ಹಂಚಿಕೆ ಮಾಡುವ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯವನ್ನು ಪಾಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ಒಳ ಮೀಸಲಾತಿ ಜಾರಿಯಿಂದ ಪರಿಶಿಷ್ಟ ಜಾತಿ 101 ಉಪ ಜಾತಿಗಳಲ್ಲಿ ವೈಮನಸ್ಸು ಹಾಗೂ ಭಿನ್ನಾಪ್ರಾಯಗಳು ಇವೆ. ಇದನ್ನು ತಿಳಿಗೊಳಿಸುವ ಕೆಲಸವನ್ನು ನಾವೆಲ್ಲರು ಮಾಡಬೇಕಾಗಿದೆ. ಮೀಸಲಾತಿಯ ವರ್ಗೀಕರಣ ವಾಸ್ತವವನ್ನು ಅರ್ಥ ಮಾಡಿಕೊಂಡು ಸಮಾಜವನ್ನು ತಿಳಿಗೊಳಿಸುವ ಕೆಲಸವನ್ನು ಮಾಡೋಣ ಎಂದರು.
ಒಳ ಮೀಸಲಾತಿಯಿಂದ ಯಾವುದೇ ಜಾತಿಗಳಿಗೆ ಅನ್ಯಾಯವಾಗಿಲ್ಲ. ಯಾವ ಸಮುದಾಯವು ಮೇಲಗೈ ಸಾಧಿಸಲಿಲ್ಲ. ಅಂಬೇಡ್ಕರ್ ಅವರ ಆಶಯದಂತೆ ಮೀಸಲಾತಿ ವರ್ಗೀಕರಣವಾಗಿದೆ. ಇದನ್ನು ನಾವೆಲ್ಲರು ಅರ್ಥ ಮಾಡಿಕೊಳ್ಳಬೇಕು. ಎಡಗೈ, ಬಲಗೈಗಳಿಗೆ ಮೀಸಲಾತಿ ವಿಂಗಡನೆ ಮಾಡಬೇಕೆಂಬ ಒತ್ತಾಯ ಇಂದಿನದಲ್ಲ. 30 ವರ್ಷಗಳ ಹೋರಾಟ ನಡೆದಿದೆ. ಸಮುದಾಯದ ಹೆಚ್ಚಾಗಿರುವ ಕಡೆ ಕಿತ್ತಾಟಗಳು ಸಹಜ. ಮನುವಾದಿಗಳು ಇದನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ತಂತ್ರ ಪಾಲಿಸಿದಂತೆ ಮಾಡಬೇಕಾಗಿದೆ. ರಾಜಕೀಯ ಅಧಿಕಾರವನ್ನು ಪಡೆದುಕೊಳ್ಳುವ ನಮ್ಮ ಹೋರಾಟ ಸಂಘಟಿತವಾಗಬೇಕಾಗಿದೆ ಎಂದರು.
ಒಳ ಮೀಸಲಾತಿ ಜಾರಿಯಿಂದ ಸಮಾನ ಅವಕಾಶ ದೊರೆತಿದೆ. ಇದನ್ನು ತಿಳಿಸುವ ಕಾರ್ಯವನ್ನು ನಾವೆಲ್ಲರು ಮಾಡಬೇಕಾಗಿದೆ. ಮೈಸೂರಿನಲ್ಲಿ ಪ್ರಥಮ ಸಭೆಯಾಗಿದೆ. ನಂತರ ಚಾಮರಾಜನಗರದಲ್ಲಿ ಮತ್ತೊಂದು ಸಭೆಯನ್ನು ಮಾಡುತ್ತಿದ್ದೇವೆ. ಇನ್ನು ಎಲ್ಲಾ ಜಿಲ್ಲೆಗಳಲ್ಲಿಯೂ ಚಿಂತನ ಮಂಥನ ಸಭೆಗಳನ್ನು ಆಯೋಜನೆ ಮಾಡಿ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ ಮಾಡಬೇಕು. ಮೀಸಲಾತಿ ವಿರೋಧಿಗಳು ನಮ್ಮ ಒಡಕಿನ ಲಾಭವನ್ನು ಪಡೆದುಕೊಳ್ಳಲು ನಮ್ಮಲ್ಲಿಯೇ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ನರೇಂದ್ರಸ್ವಾಮಿ ದೂರಿದರು.
ವಿಧಾನ ಪರಿಷತ್ ಸದಸ್ಯ ಸುಧಾಮ ದಾಸ್ ಮಾತನಾಡಿ, ಒಳ ಮೀಸಲಾತಿ ಜಾರಿಯ ಹೆಸರಿನಲ್ಲಿ ದಲಿತ ಸಮುದಾಯಗಳನ್ನು ವಿಘಟನೆ ಮಾಡುವ ವ್ಯವಸ್ಥಿತವಾಗಿ ನಡೆಯುತ್ತಿದೆ. ಒಳ ಮೀಸಲಾತಿ ಜಾರಿಯಾಗಿದ್ದು ಇದರ ಪ್ರಯೋಜನವನ್ನು ಪರಿಶಿಷ್ಟ ಜಾತಿ ಪ್ರವರ್ಗ ಎ. ಬಿ. ಮತ್ತು ಸಿ ವರ್ಗಗಳು ಪಡೆದು ಕೊಳ್ಳಲು ಮುಂದಾಗಬೇಕು. ಒಂದು ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಅವರು ತತ್ವ ಅದರ್ಶಗಳೊಂದಿಗೆ ಸಾಗಬೇಕಾಗಿದೆ. ರಾಜ್ಯದಲ್ಲಿ ಎಡಗೈ ಮತ್ತು ಬಲಗೈ ಸಮುದಾಯಳ ನಡುವೆ ಕಂದಕ ಏರ್ಪಟ್ಟಿದೆ. ಇದನ್ನು ಒಂದು ಮಾಡುವ ನಿಟ್ಟಿನಲ್ಲಿ ನಮ್ಮ ಕಾರ್ಯಯೋಜನೆಗಳು ಸಿದ್ದವಾಗಿದೆ. ಹೀಗಾಗಿ ನಿಮ್ಮ ಬಳಿಗೆ ಬಂದಿದ್ದೇವೆ. ಸಲಹೆ ಸೂಚನೆಗಳು ಹಾಗೂ ಮಾರ್ಗದರ್ಶನವನ್ನು ನೀಡಬೇಕು. ನಮ್ಮಲ್ಲಿರುವ ಜ್ಞಾನ ಮತ್ತು ಅನುಭವನ್ನು ಅರಿವು ಮುಡಿಸುವ ಪ್ರಯತ್ನವಾಗಿದೆ ಎಂದರು.
ದಲಿತ ಮುಖಂಡ ವೆಂಕಟರಮಣಸ್ವಾಮಿ (ಪಾಪು) ಮಾತನಾಡಿ, ಡಾ.ಬಿ.ಆರ್. ಅಂಭೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿ ಮೀಸಲಾತಿಯನ್ನು ಪಡೆದುಕೊಳ್ಳುವ ಪರಿಶಿಷ್ಟ ಜಾತಿಗಳು ಅವರಿಗೆ À ಅಪಮಾನವಾದಾಗ ಹಾಗು ಪರಿಶಿಷ್ಟರ ಮೇಲೆ ದೌರ್ಜನ್ಯಗಳು ನಡೆದಾಗ ಪ್ರತಿಭಟನೆ ಮಾಡುವುದಿಲ್ಲ. ಹಾಗು ಪ್ರತಿರೋಧ ವ್ಯಕ್ತಪಡಿಸುವುದಿಲ್ಲ. ಕೇವಲ ಬಲಗೈ ಹಾಗು ಎಡಗೈ ಸಮುದಾಯಗಳಿಗೆ ಮಾತ್ರ ಸಿಮೀತವಾಗಿದೆ. ಇತರೇ 99 ಜಾತಿಗಳು ಮೀಸಲಾತಿಯ ಲಾಭ ಪಡೆದುಕೊಂಡು ಸುಮ್ಮನಾಗುತ್ತಿದೆ. ಇದರ ಬಗ್ಗೆ ಚರ್ಚೆಯಾಗಬೇಕು. ಅವರು ಸಹ ಎಚ್ಚರಗೊಳ್ಳಬೇಕು. ಜೊತೆಗೆ ಎಸ್ಇಪಿ ಮತ್ತು ಟಿಎಎಸ್ಪಿ ಹಣ ದುರುಪಯೋಗ ವಾಗದಂತೆ ತಡೆಯಬೇಕು. ಈ ಹಣ ಇತರೇ ಗ್ಯಾರಂಟಿಗಳಿಗೆ ಹೋಗದಂತೆ ತಡೆಯಲÀು ನರೇಂದ್ರ ಸ್ವಾಮಿ, ಸುಧಾಮ ದಾಸ್ ಮುಂದಾಗಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ವಿಶ್ವಚೇತನ ಸಮೂಹದ ಅಧ್ಯಕ್ಷರಾದ ಪ್ರೇಮಲತಾ ಕೃಷ್ಣಸ್ವಾಮಿ, ರಾಜ್ಯ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಹೆಣ್ಣೂರು ಶ್ರೀನಿವಾಸ್, ಭೋವಿ ಸಮಾಜದ ರಾಜ್ಯ ಸಂಚಾಲಕ ಬಾಬು ಕುಂದಾಪುರ, ಲಂಬಾಣಿ ಸಮಾಜದ ರಾಜ್ಯ ಸಂಚಾಲಕ ರುದ್ರಪುನಿತ್, ದಲಿತ ವೆಲ್ಪರ್ ಟ್ರಸ್ಟ್ ನ ಅಧ್ಯಕ್ಷ ಪ್ರೊ. ಕೆ ಮಹೇಶ್, ದೇವರತ್ನ ಫೌಂಡೇಶನ್ನ ಶಿವಪ್ರಸಾದ್ , ದಲಿತ ಮುಖಂಡರಾದ ಸೋಮೇಶ್ವರ ನಲ್ಲೂರು, ಅಯ್ಯನಪುರ ಶಿವಕುಮಾರ್, ಬಸವನಪುರ ರಾಜಶೇಖರ್, ಹೆಚ್. ಹೆಚ್ ನಾಗರಾಜು, ಕಾಗಲವಾಡಿ ಶಿವಸ್ವಾಮಿ, ಸಿ.ಕೆ. ಮಂಜುನಾಥ್, ವಾಸು, ಶಿವು ರಾಮಸಮುದ್ರ, ಚಿನ್ನಮ್ಮ, ನಾಗರತ್ನಮ್ಮ, ಕಲಾವತಿ, ಭಾಗ್ಯಮ್ಮ, ಹಾಗೂ ಪರಿಶಿಷ್ಟ ಜಾತಿಯ ಮುಖಂಡರುಗಳು ಉಪಸ್ಥಿತರಿದ್ದರು.





















