Home ಜಿಲ್ಲೆ ಮೈಸೂರು ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ: ಸಾಂಸ್ಕೃತಿಕ ಸಂಭ್ರಮ

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ: ಸಾಂಸ್ಕೃತಿಕ ಸಂಭ್ರಮ

ಸಂಜೆವಾಣಿ ನ್ಯೂಸ್
ಮೈಸೂರು: ನ.16:-
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2026ರ ಅಂಗವಾಗಿ ಪೀಪಲ್ಸ್ ಪಾರ್ಕ್ ಗ್ರಂಥಾಲಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಕೇಂದ್ರ ಗ್ರಂಥಾಲಯದ ಸುನಿತಾ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುದರ್ಶನ್ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ಆಧುನಿಕ ಯುಗದಲ್ಲಿ ಪುಸ್ತಕಗಳ ಕಡೆಗೆ ಓದುಗರು ಸ್ವಲ್ಪ ವಿಮುಖರಾಗುತ್ತಿರುವುದು ಆತಂಕದ ಸಂಗತಿ. ಕಂಪ್ಯೂಟರ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪುಸ್ತಕಗಳು ಸುಲಭವಾಗಿ ಲಭ್ಯವಾಗುತ್ತಿರುವುದರಿಂದ ಕೈಯಲ್ಲಿ ಪುಸ್ತಕ ಹಿಡಿದು ಓದುವ ಆತ್ಮೀಯ ಅನುಭವ ಕ್ರಮೇಣ ಕಡಿಮೆಯಾಗುತ್ತಿದೆ ಎಂದರು.

ಪುಸ್ತಕವೆಂಬುದು ಕೇವಲ ಜ್ಞಾನ ನೀಡುವ ಸಾಧನವಲ್ಲ, ಅದು ಓದುಗನೊಂದಿಗೆ ಆತ್ಮೀಯ ಸಂಬಂಧ ಬೆಸೆಯುವ ಅಮೂಲ್ಯ ಸಂಗಾತಿ. ಪುಸ್ತಕವೆಂಬುದು ಲೇಖಕ, ಪ್ರಕಾಶಕ, ಮುದ್ರಕ, ಮಾರಾಟಗಾರ ಸೇರಿದಂತೆ ಹಲವರ ಬದುಕನ್ನು ಒಳಗೊಂಡಿರುವ ಒಂದು ಉದ್ಯಮ ಸರಪಳಿಯಾಗಿದೆ. ಆದ್ದರಿಂದ ಎಲೆಕ್ಟ್ರಾನಿಕ್ ಪುಸ್ತಕಗಳ ಓದಿನ ಜೊತೆಗೆ ಮುದ್ರಿತ ಪುಸ್ತಕಗಳ ಓದಿಗೂ ಆದ್ಯತೆ ನೀಡಬೇಕು. ಮುದ್ರಿತ ಪುಸ್ತಕವನ್ನು ಕೈಯಲ್ಲಿ ಹಿಡಿದು ಓದುವುದರಿಂದ ಸಿಗುವ ಸಂತೋಷ ಮತ್ತು ಆತ್ಮೀಯ ಅನುಭವವೇ ವಿಭಿನ್ನ. ಓದುವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಓದುಗರ ಮೇಲಿದೆ. ಹೆಚ್ಚಿನ ಜನರನ್ನು, ವಿಶೇಷವಾಗಿ ಯುವಜನರನ್ನು ಗ್ರಂಥಾಲಯಗಳತ್ತ ಆಕರ್ಷಿಸುವುದೇ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಮುಖ್ಯ ಆಶಯವಾಗಿದೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಸದಸ್ಯತ್ವ ಪಡೆದವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ: ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಶಾಲೆ, ಮೈಸೂರಿನ ನಿರ್ದೇಶಕಿ ವಿದೂಷಿ ಡಿಂಪಲ್ ಹಾಗೂ ತಂಡದವರಿಂದ ನರ್ತನ ಅನುಭವ ಭರತನಾಟ್ಯ ಪ್ರದರ್ಶನ, ಕನ್ನಡ ಸಂಸ್ಕೃತಿ ಇಲಾಖಾ ವತಿಯಿಂದ ಮಂಜುಳ ಅವರಿಂದ ಭಕ್ತಿಗೀತೆ ಮತ್ತು ಜನಪದ ಗೀತೆ, ಸಿತಾರ್ ಸಿಂಚನ, ಮೈಸೂರು ಉಸ್ತಾದ್ ಡಾ. ಮೊಹಸಿನ್ ಖಾನ್ ಅವರ ವಿದ್ಯಾರ್ಥಿಗಳಿಂದ ಸಿತಾರ ವಾದನ, ಶ್ರೀ ರಂಜಿನಿ ಜಿ. ನೃತ್ಯಕಲಾಮಣಿ ಕ್ಲಾಸಿಕಲ್ ತಂಡದವರಿಂದ ಭರತನಾಟ್ಯ, ಗ್ರಂಥಾಲಯ ಇಲಾಖೆ ಸಿಬ್ಬಂದಿಗಳು ಹಾಗೂ ಕುಟುಂಬ ಸದಸ್ಯರಿಂದ ಭರತನಾಟ್ಯ / ನೃತ್ಯ ಪ್ರದರ್ಶನ ಮತ್ತು ಸಾರ್ವಜನಿಕ ಓದುಗರಿಂದ ಜನಪದ ಗೀತೆ / ಭಾವಗೀತೆಯ ಮೂಲಕ ನೆರೆದಿದ್ದ ಎಲ್ಲರನ್ನು ರಂಜಿಸಿದರು.

ಕಾರ್ಯಕ್ರಮದಲ್ಲಿ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಮಂಜುನಾಥ್ ಬಿ., ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕಿ ಸುಮಾ ಕೋಡಿಹಳ್ಳಿ, ಬಾಲ್ಯ ಫೌಂಡೇಶನ್ ಸಂಸ್ಥಾಪಕರಾದ ಅನಿಲ್ ಹಾಗೂ ಉಮಾ ಅನಿಲ್, ನಗರ ಕೇಂದ್ರ ಗ್ರಂಥಾಲಯದ ಸಿಬ್ಬಂದಿಗಳು ಹಾಗೂ ಗ್ರಂಥಾಲಯ ಓದುಗರು / ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಗರ ಕೇಂದ್ರ ಗ್ರಂಥಾಲಯದ ಸಿಬ್ಬಂದಿ ಕುಸುಮ ಎಂ. ಕಾರ್ಯಕ್ರಮ ನಿರೂಪಿಸಿದರೆ, ರಮೇಶ್ ಹೆಚ್.ವಿ. ವಂದಿಸಿದರು