Home ಜಿಲ್ಲೆ ಮೈಸೂರು ಬಿರ್ಸಾ ಮುಂಡಾ ಕೇವಲ ಸ್ವಾತಂತ್ರ್ಯ ಹೋರಾಟಗಾರರಲ್ಲ, ಆದಿವಾಸಿಗಳ ಸ್ವಾಭಿಮಾನದ ಪ್ರತೀಕ: ಯತೀಂದ್ರ ಸಿದ್ದರಾಮಯ್ಯ

ಬಿರ್ಸಾ ಮುಂಡಾ ಕೇವಲ ಸ್ವಾತಂತ್ರ್ಯ ಹೋರಾಟಗಾರರಲ್ಲ, ಆದಿವಾಸಿಗಳ ಸ್ವಾಭಿಮಾನದ ಪ್ರತೀಕ: ಯತೀಂದ್ರ ಸಿದ್ದರಾಮಯ್ಯ

ಸಂಜೆವಾಣಿ ನ್ಯೂಸ್
ಮೈಸೂರು: ನ.16:-
ಬಿರ್ಸಾ ಮುಂಡಾ ಅವರು ಕೇವಲ ಒಬ್ಬ ಸ್ವಾತಂತ್ರ್ಯ ಹೋರಾಟಗಾರರಲ್ಲ, ಅವರು ಭಾರತೀಯ ಆದಿವಾಸಿಗಳ ಸ್ವಾಭಿಮಾನದ ಪ್ರತೀಕ ಎಂದು ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಆಯೋಜಿಸಲಾಗಿದ್ದ ಭಗವಾನ್ ಶ್ರೀ ಬಿರ್ಸಾ ಮುಂಡಾ ಅವರ 151ನೇ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 1875ರ ನವೆಂಬರ್ 15ರಂದು ಇಂದಿನ ಜಾರ್ಖಂಡ್ ಪ್ರದೇಶದಲ್ಲಿ ಜನಿಸಿದ ಬಿರ್ಸಾ ಮುಂಡಾ ಅವರು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಬ್ರಿಟಿಷರ ವಸಾಹತುಶಾಹಿ ಆಡಳಿತದ ವಿರುದ್ಧ ಹೋರಾಟದ ಕಹಳೆ ಮೊಳಗಿಸಿದರು. ಬ್ರಿಟಿಷರ ಶೋಷಣೆ, ಭೂಮಿಯ ಮೇಲಿನ ಬುಡಕಟ್ಟು ಜನರ ಸಾಂಪ್ರದಾಯಿಕ ಹಕ್ಕುಗಳ ಕಸಿದುಕೊಳ್ಳುವಿಕೆ, ಸಾಮಾಜಿಕ ಅನ್ಯಾಯ ಮತ್ತು ಸಾಂಸ್ಕೃತಿಕ ದಬ್ಬಾಳಿಕೆಯ ವಿರುದ್ಧ ಅವರು ಜನರನ್ನು ಸಂಘಟಿಸಿದರು ಎಂದು ಹೇಳಿದರು.

ನಮ್ಮ ಭೂಮಿ, ನಮ್ಮ ಸಂಸ್ಕೃತಿ, ನಮ್ಮ ಪರಂಪರೆ ಮತ್ತು ನಮ್ಮ ಸ್ವಾಭಿಮಾನವನ್ನು ನಾವು ಕಾಪಾಡಿಕೊಳ್ಳಬೇಕು ಎಂಬ ಅವರ ಕರೆ ಇಂದಿಗೂ ಚಿರಸ್ಮರಣೀಯ. ಅಲ್ಪಾಯುಷ್ಯದಲ್ಲಿಯೇ ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದರು. ಆದರೆ ಅವರ ಹೋರಾಟದ ಕಿಚ್ಚು ಮತ್ತು ಆದರ್ಶಗಳು ಇಂದಿಗೂ ಕೋಟ್ಯಂತರ ಜನರಿಗೆ ಪ್ರೇರಣೆಯಾಗಿದೆ ಎಂದರು.
ಸರ್ಕಾರದ ಸೌಲಭ್ಯಗಳು ಕೇವಲ ಪ್ರಭಾವಿಗಳಿಗೆ ಸೀಮಿತವಾಗದೆ ಕಟ್ಟಕಡೆಯ ಸಾಮಾನ್ಯ ಆದಿವಾಸಿಗಳಿಗೂ ನೇರವಾಗಿ ತಲುಪುವಂತಾಗಲು ಪ್ರತ್ಯೇಕ ಆದಿವಾಸಿ ನಿಗಮ ಸ್ಥಾಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಆದಿವಾಸಿ ಸಮುದಾಯದವರು ತಮ್ಮ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಬೇಕು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ ಸಮುದಾಯದ ಪ್ರಗತಿಗಾಗಿ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಅವರು ಕರೆ ನೀಡಿದರು.

ಬಿರ್ಸಾ ಮುಂಡಾ ಆದರ್ಶ ಇಂದಿಗೂ ಪ್ರಸ್ತುತ:
ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ತಮ್ಮ ಅಲ್ಪಾವಧಿಯ 25 ವರ್ಷಗಳ ಜೀವಿತಾವಧಿಯಲ್ಲೇ ದೇಶದ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಬುಡಕಟ್ಟು ಜನಾಂಗದ ಹಕ್ಕುಗಳಿಗಾಗಿ ಅಚಲ ಹೋರಾಟ ನಡೆಸಿದ ಮಹಾನ್ ಚೇತನ, ಧರ್ತಿ ಅಬಾ ಎಂದೇ ಖ್ಯಾತರಾದ ಬಿರ್ಸಾ ಮುಂಡಾ ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಬುಡಕಟ್ಟು ಜನಾಂಗದವರ ಸರ್ವಾಂಗೀಣ ಅಭಿವೃದ್ಧಿ, ಶಿಕ್ಷಣ ಮತ್ತು ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಸಮಾಜ ಹಾಗೂ ಆಡಳಿತ ವ್ಯವಸ್ಥೆ ಒಟ್ಟಾಗಿ ಶ್ರಮಿಸಬೇಕಿದೆ ಎಂದು ಪ್ರತಿಪಾದಿಸಿದರು.

ಜಯಂತಿ ಸರ್ಕಾರಿ ವತಿಯಿಂದ ಆಚರಿಸಲಿ:
ಎಚ್.ಡಿ. ಕೋಟೆ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿಯನ್ನು ಇತರೆ ಮಹನೀಯರ ಜಯಂತಿಗಳಂತೆ ರಾಜ್ಯಾದ್ಯಂತ ಸರ್ಕಾರಿ ವತಿಯಿಂದ ಆಚರಿಸಲು ಅವಕಾಶ ಕಲ್ಪಿಸಬೇಕು ಎಂದರು.

ಮುಂದಿನ ದಿನಗಳಲ್ಲಿ ಬಿರ್ಸಾ ಮುಂಡಾ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಸರ್ಕಾರ ಸೂಕ್ತ ಅವಕಾಶ ಹಾಗೂ ಸ್ಥಳಾವಕಾಶ ನೀಡಬೇಕು. ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ವಾಸವಿರುವ ಆದಿವಾಸಿ ಹಾಗೂ ಬುಡಕಟ್ಟು ಸಮುದಾಯದ ಜನರಿಗೆ ಮೂಲಭೂತ ಸೌಕರ್ಯ ಸೇರಿದಂತೆ ಮತ್ತಷ್ಟು ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಾಗೂ ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಿದ ಚಾಮರಾಜನಗರ, ಹಾವೇರಿ, ಚಿಕ್ಕಮಗಳೂರು, ಮೈಸೂರು ಜಿಲ್ಲೆಯ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಅಶೋಕ್ ಡಿ.ಆರ್., ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಭಾರತಿ ಸಿ.ಆರ್., ಉಪನಿರ್ದೇಶಕಿ ಗಿರಿಜಾಂಬ ಹೆಚ್.ಎಸ್. ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.