Home ಜಿಲ್ಲೆ ಅಥಣಿಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ ಮಂಜೂರು : ನಾಳೆ ಉದ್ಘಾಟನೆ

ಅಥಣಿಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ ಮಂಜೂರು : ನಾಳೆ ಉದ್ಘಾಟನೆ

ಅಥಣಿ : ಬೆಳಗಾವಿ ಜಿಲ್ಲಾ ಮಟ್ಟದ 73 ನೇ ಸಹಕಾರ ಸಪ್ತಾಹ ಹಾಗೂ ಅಥಣಿ ತಾಲೂಕಿಗೆ ನೂತನವಾಗಿ ಮಂಜೂರಾದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಉದ್ಘಾಟನಾ ಸಮಾರಂಭವನ್ನು ಸೋಮವಾರ ದಿ.16 ರಂದು ಮುಂಜಾನೆ 10:30 ಗಂಟೆಗೆ, ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆಯ ಆವರಣದಲ್ಲಿರುವ ರೈತ ಭವನದಲ್ಲಿ ಜರುಗಲಿದೆ ಎಂದು ತಾಲೂಕಾ ಸಹಕಾರ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ನೂಲಿ ಹೇಳಿದರು.
ಅವರು ಶನಿವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ದೇಶದ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಪಾತ್ರ ಪ್ರಮುಖವಾಗಿದ್ದು, ಕಳೆದ 72 ವರ್ಷಗಳಿಂದ ಸಹಕಾರಿ ಮೈತ್ರಿಕೂಟದ ಪರಿಕಲ್ಪನೆಯಂತೆ ಪ್ರತಿವರ್ಷ ಎಲ್ಲಡೆ ಸಹಕಾರ ಸಪ್ತಾಹ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ದಿ. 14 ರಿಂದ 20 ರವರೆಗೆ ಜರುಗುವ ಸಹಕಾರಿ ಸಪ್ತಾಹ ಕಾರ್ಯಕ್ರಮದಲ್ಲಿ ಸಹಕಾರ ಚಳುವಳಿಯ ಸಾಧನೆಯ ಸ್ಮರಣೆ ಮತ್ತು ಭವಿಷ್ಯದ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಹೊಸ ಚಿಂತನೆಗಳನ್ನು ರೂಪಿಸುವುದು, ಉತ್ತಮ ಪರಿಸರ, ತಂತ್ರಜ್ಞಾನ, ಕೌಶಲ್ಯ ಆಧಾರಿತ, ಒತ್ತಿಪರ ಸೇವೆ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಇದಲ್ಲದೆ ಸಹಕಾರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಸಹಕಾರಿ ಸಂಘಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದರು.
ಈ ಸಮಾರಂಭದಲ್ಲಿ ಅಧ್ಯಕ್ಷತೆ ಹಾಗೂ ಉದ್ಘಾಟಕರಾಗಿ ಸಹಕಾರ ಸಚಿವರಾದ ಲಕ್ಷ್ಮಣ ಸವದಿ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಸೇರಿದಂತೆ ಬೆಳಗಾವಿ ಜಿಲ್ಲೆಯ ವಿವಿಧ ಮತಕ್ಷೇತ್ರದ ಶಾಸಕರು, ಸಂಸದರು, ನಿಗಮ ಮಂಡಳಿಯ ಅಧ್ಯಕ್ಷರು, ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲೆಯ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟ, ಬಿಡಿಸಿಸಿ ಬ್ಯಾಂಕ್, ಜಿಲ್ಲಾ ಸಹಕಾರ ಯುನಿಯನ್ ಪದಾಧಿಕಾರಿಗಳು ಹಾಗೂ ಸಹಕಾರ ಇಲಾಖೆಯ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ತಾಲೂಕಿನ ಎಲ್ಲಾ ಸಹಕಾರಿ ಧುರೀಣರು, ವಿವಿಧ ಸಹಕಾರ ಸಂಘಗಳ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಪ್ತಾಹ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

ಅಥಣಿ ತಾಲೂಕಿಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಮಂಜೂರು:
ಸಹಕಾರ ಇಲಾಖೆಗೆ ಸಂಬಂಧಪಟ್ಟಂತೆ ಚಿಕ್ಕೋಡಿ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ವ್ಯಾಪ್ತಿಗೆ ಒಳಪಟ್ಟಿದ್ದ ಚಿಕ್ಕೋಡಿ, ನಿಪ್ಪಾಣಿ, ರಾಯಭಾಗ, ಅಥಣಿ ಮತ್ತು ಕಾಗವಾಡ ವ್ಯಾಪ್ತಿಯನ್ನು ವಿಭಜನೆ ಮಾಡಲಾಗಿದ್ದು, ಚಿಕ್ಕೋಡಿ, ನಿಪ್ಪಾಣಿ ಮತ್ತು ರಾಯಬಾಗ ತಾಲೂಕುಗಳ 3 ಮೂರು ವಿಧಾನಸಭಾ ಮತಕ್ಷೇತ್ರವಾರು ಸಹಕಾರ ಸಂಘಗಳು ಚಿಕ್ಕೋಡಿ ಎ.ಆರ್. ಸಿ. ಎಸ್ ಕಚೇರಿಗೆ ಒಳಪಟ್ಟರೆ, ಅಥಣಿ ತಾಲೂಕಿಗೆ ನೂತನವಾಗಿ ಮಂಜೂರಾಗಿರುವ ಎ.ಆರ್. ಸಿ. ಎಸ್ ಕಚೇರಿಗೆ ಅಥಣಿ, ಕಾಗವಾಡ ಮತ್ತು ಕುಡಚಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಸಹಕಾರ ಸಂಘಗಳು ಒಳಪಡುತ್ತವೆ ಎಂದರು.
ಅಥಣಿ ಮತ್ತು ಕಾಗವಾಡ ತಾಲೂಕುಗಳಲ್ಲಿ ಸಹಕಾರ ಸಂಘಗಳ ಸಂಖ್ಯೆ ಹೆಚ್ಚಿಗೆ ಇರುವುದರಿಂದ ಅಥಣಿಯಲ್ಲಿ ಎ .ಆರ್. ಸಿ. ಎಸ್ ಕಚೇರಿ ಆರಂಭಿಸುವಂತೆ ಬೇಡಿಕೆ ಹೆಚ್ಚಾಗಿತ್ತು. ಅಥಣಿ ಮತಕ್ಷೇತ್ರದ ಶಾಸಕರು ಹಾಗೂ ಇಂದಿನ ಸಹಕಾರ ಸಚಿವರು ಆಗಿರುವ ಲಕ್ಷ್ಮಣ ಸವದಿ ಅವರ ಸತತ ಪ್ರಯತ್ನದಿಂದ ಸಹಾಯಕ ನಿಬಂಧಕರ ಕಚೇರಿ ಈಗ ಮಂಜೂರಾಗಿದೆ. ಈ ಕಚೇರಿಯ ವ್ಯಾಪ್ತಿಗೆ ಅಥಣಿ, ಕಾಗವಾಡ ಮತ್ತು ಕುಡುಚಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 1235 ಸಹಕಾರ ಸಂಘಗಳು, 112 ಸೌಹಾರ್ದ ಸಹಕಾರಿಗಳು, 26 ಗಿರವಿ ಅಂಗಡಿಗಳು, 90 ಲೇವಾದೇವಿ, 06 ಚಿಪ್್ಸ, 6792 ಇತರೆ ಸಂಘ ಸಂಸ್ಥೆಗಳು ಸೇರಿದಂತೆ ಒಟ್ಟು 8261 ಸಂಸ್ಥೆಗಳು ಕಾರ್ಯ ನಿರ್ವಹಿಸಲಿವೆ. ನೂತನವಾಗಿ ರಚನೆಯಾಗಿರುವ ಸಹಾಯಕ ನಿಬಂಧಕರ ಕಚೇರಿಗೆ ಒಟ್ಟು 13 ಹುದ್ದೆಗಳು ಮಂಜೂರಾಗಿವೆ ಎಂದು ಹೇಳಿದರು.