Home ಜಿಲ್ಲೆ ಮೈಸೂರು ಎಂಟು ವರ್ಷವಾದರೂ ಸುಳ್ವಾಡಿ ಸಂತ್ರಸ್ತರ ಕಣ್ಣೀರು ಒರಸದ ಸರ್ಕಾರ

ಎಂಟು ವರ್ಷವಾದರೂ ಸುಳ್ವಾಡಿ ಸಂತ್ರಸ್ತರ ಕಣ್ಣೀರು ಒರಸದ ಸರ್ಕಾರ

ಸಂಜೆವಾಣಿ ವಾರ್ತೆ
ಹನೂರು ನ 12 :-
ಸುಳ್ವಾಡಿ ವಿಷ ಪ್ರಸಾದ ದುರಂತ ಸಂಭವಿಸಿ ಎಂಟು ವರ್ಷಗಳು ಕಳೆದರೂ ಸರ್ಕಾರ ನೀಡಿದ್ದ ಭರವಸೆಗಳು ಭರವಸೆಗಳಾಗಿಯೇ ಉಳಿದಿವೆ. ಸರ್ಕಾರ ಶೀಘ್ರದಲ್ಲೇ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಡಿಎಸ್‍ಎಸ್ ? ಮಾದಾರ ಮಹಾಸಭಾ ಜಂಟಿ ಹೋರಾಟದ ಮುಖಂಡರು ಎಚ್ಚರಿಕೆ ನೀಡಿದರು.


ಸಂತ್ರಸ್ತರಿಗೆ ನಿವೇಶನಕ್ಕಾಗಿ ಕೌದಳ್ಳಿ ಸಮೀಪದ ಜ್ಯೋತಿಪುರ ಹಾಗೂ ಬಿದರಹಳ್ಳಿ ಗ್ರಾಮಗಳಲ್ಲಿ ನಿಗದಿಪಡಿಸಿರುವ ಸ್ಥಳಕ್ಕೆ ಎರಡೂ ಸಂಘಟನೆಗಳ ಕಾರ್ಯಕರ್ತರು ಮತ್ತು ಮುಖಂಡರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ನಂತರ ಸಂತ್ರಸ್ತ ಕುಟುಂಬಸ್ಥರೊಂದಿಗೆ ಸಮಾಲೋಚನೆ ಮಾಡಿ, ಆದಷ್ಟು ಬೇಗ ನಿವೇಶನ ದೊರಕಿಸಿಕೊಡುವ ಧೈರ್ಯ ಮತ್ತು ಭರವಸೆ ನೀಡಿದರು.


ಈ ವೇಳೆ ಮಾತನಾಡಿದ ಹನೂರು ತಾಲ್ಲೂಕು ಮಾದಾರ ಮಹಾಸಭಾ ಅಧ್ಯಕ್ಷ ಸುದೇಶ್ ಅವರು, ಸುಳ್ವಾಡಿ ವಿಷ ಪ್ರಸಾದ ದುರಂತ ಸಂಭವಿಸಿ ಎಂಟು ವರ್ಷಗಳು ಕಳೆದರೂ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರ ನೀಡಿದ್ದ ಭರವಸೆಗಳು ಇನ್ನೂ ಈಡೇರದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸಂತ್ರಸ್ತ ಕುಟುಂಬಗಳಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವುದರ ಜೊತೆಗೆ ಅಗತ್ಯ ಸರ್ಕಾರಿ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಡಿಎಸ್‍ಎಸ್ ಮೈಸೂರು ವಿಭಾಗೀಯ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ಮಾತನಾಡಿ, ಸುಳ್ವಾಡಿ ವಿಷ ಪ್ರಸಾದ ದುರಂತದ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ದಲಿತ ಸಂಘರ್ಷ ಸಮಿತಿ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದೆ. ಸಂತ್ರಸ್ತರ ನೋವಿಗೆ ಸ್ಪಂದಿಸುವುದರ ಜೊತೆಗೆ ಅವರ ಹಕ್ಕುಗಳಿಗಾಗಿ ಅವಿರತವಾಗಿ ಶ್ರಮಿಸುತ್ತಿದೆ. ಡಿಎಸ್‍ಎಸ್ ಸಂಘಟನೆಯ ಹೋರಾಟಕ್ಕೆ ಇದೀಗ ಹನೂರು ತಾಲೂಕು ಮಾದಾರ ಮಹಾಸಭಾ ಸಂಘಟನೆಯೂ ಕೈಜೋಡಿಸಿರುವುದು ಹೋರಾಟಕ್ಕೆ ಮತ್ತಷ್ಟು ಬಲ ನೀಡಿದಂತಾಗಿದೆ ಎಂದರು.


ಎಂಟು ವರ್ಷಗಳ ಸುದೀರ್ಘ ಅವಧಿ ಕಳೆದರೂ ಸಂತ್ರಸ್ತ ಕುಟುಂಬಗಳ ಬದುಕಿನಲ್ಲಿ ನಿರೀಕ್ಷಿತ ಬದಲಾವಣೆ ಕಂಡುಬಂದಿಲ್ಲ. ಸರ್ಕಾರ ನೀಡಿದ ಭರವಸೆಗಳು ಕೇವಲ ಭರವಸೆಗಳಾಗಿಯೇ ಉಳಿಯಬಾರದು. ಸಂತ್ರಸ್ತರಿಗೆ ನ್ಯಾಯ, ಸೂಕ್ತ ಪರಿಹಾರ ಹಾಗೂ ಸರ್ಕಾರದಿಂದ ದೊರೆಯಬೇಕಾದ ಎಲ್ಲ ಸೌಲಭ್ಯಗಳನ್ನು ತಕ್ಷಣ ಒದಗಿಸಬೇಕು. ಈ ನಿಟ್ಟಿನಲ್ಲಿ ಎರಡೂ ಸಂಘಟನೆಗಳು ಒಗ್ಗಟ್ಟಿನಿಂದ ಹೋರಾಟವನ್ನು ಮುಂದುವರಿಸಲಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹನೂರು ತಾಲ್ಲೂಕು ಮಾದಾರ ಮಹಾಸಭಾ ಮತ್ತು ಡಿಎಸ್‍ಎಸ್ ಸಂಘಟನೆಯ ಕಾರ್ಯಕರ್ತರು ಹಾಜರಿದ್ದರು.