Home ಜಿಲ್ಲೆ ಕಲಬುರಗಿ ಜೀವವಿಮೆ ಹಣ ಕೊಡಿಸುವುದಾಗಿ ನಂಬಿಸಿ ಮಹಿಳೆಗೆ 4.73 ಲಕ್ಷ ರೂ.ವಂಚನೆ

ಜೀವವಿಮೆ ಹಣ ಕೊಡಿಸುವುದಾಗಿ ನಂಬಿಸಿ ಮಹಿಳೆಗೆ 4.73 ಲಕ್ಷ ರೂ.ವಂಚನೆ

ಕಲಬುರಗಿ,ಅ.19-ಜೀವವಿಮೆ ಹಣ ಮತ್ತು ಪ್ರತಿಮೆ ಹೆಸರಿನಲ್ಲಿ ಸರ್ಕಾರಿ ಅನುದಾನ ಕೊಡಿಸುವುದಾಗಿ ಸಳ್ಳು ಭರವಸೆ ನೀಡಿ ಮಹಿಳೆಯೊಬ್ಬರಿಗೆ 4,73,800 ರೂ.ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಹೀರಾಪುರ ಜಿಡಿಎ ಬಡಾವಣೆಯ ಚಂದ್ರಕಲಾ ರಾಜಕುಮಾರ ಮಾವಿನ್ ಎಂಬುವವರೆ ವಂಚನೆಗೆ ಒಳಗಾಗಿದ್ದು, ಅವರು ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ಸಲ್ಲಿಸಿದ್ದಾರೆ.
ಚಂದ್ರಕಲಾ ಅವರ ಪತಿ ರಾಜಕುಮಾರ ಅವರು 2021ರಲ್ಲಿ ಕರ್ತವ್ಯ ನಿರತ ಸಮಯದಲ್ಲಿ ಫೈರಿಂಗ್ ವೇಳೆಯಲ್ಲಿ ಮೃತಪಟ್ಟಿದ್ದಾರೆ.
ಚಂದ್ರಕಲಾ ಅವರ ಮೊಬೈಲ್‍ಗೆ ಯಲ್ಲಪ್ಪ ಸುಬೇದಾರ ಎಂಬಾತ ಕರೆ ಮಾಡಿ ತಾನು ಕರ್ನಾಟಕದ ಬೆಳಗಾವಿಯನಾಗಿದ್ದು, ದೆಹಲಿ ರೆಕಾರ್ಡ್ ಆಫಿಸ್‍ನಲ್ಲಿ ಕೆಲಸ ಮಾಡುತ್ತಿದ್ದೇನೆ. ನಿಮ್ಮ ಪತಿ ರಾಜಕುಮಾರ ಸರ್ವಿಸ್ 24 ವರ್ಷವಾಗಿದ್ದು, ರೆಕಾರ್ಡ್ ಬುಕ್ ಕ್ಲೋಸ್ ಮಾಡಲಾಗುತ್ತಿದೆ. ನಿಮ್ಮ ಮತ್ತು ನಿಮ್ಮ ಅತ್ತೆಯ ಹೆಸರಿನಲ್ಲಿ ಇನ್ಸುರೆನ್ಸ್ ಮಾಡಿಸಿದ್ದು, ಕಳೆದ ಐದು ವರ್ಷಗಳಿಂದ ಇನ್ಸುರೆನ್ಸ್ ಕಟ್ಟಿರುವುದಿಲ್ಲ. ಕಾರಣ ನೀವು ಪ್ರತಿಯೊಬ್ಬರು 84,700 ರೂ.ಕಟ್ಟಿದರೆ 17 ಲಕ್ಷ ರೂ.ಇನ್ಸುರೆನ್ಸ್ ಹಣ ಬರುತ್ತದೆ ಎಂದು ಸುಳ್ಳು ಹೇಳಿ ನಂಬಿಸಿ ಶ್ಯಾಮ್ ಬಿಹಾರಿ ಎಂಬಾತನ ಹೆಸರಿನಲ್ಲಿರುವ ಬ್ಯಾಂಕಿನ್ ಸ್ಕ್ಯಾನರ್ ಕಳುಹಿಸಿದ್ದಾನೆ. ಪತಿಯ ಬೆಟಾಲಿಯನ್ ಮತ್ತು ಮೃತಪಟ್ಟಿರುವ ಬಗ್ಗೆ ಹೇಳಿದ್ದರಿಂದ ಚಂದ್ರಕಲಾ ಅವರಿಗೆ ನಂಬಿಕೆ ಬಂದು ಇವರು ಶ್ಯಾಮ್ ಬಿಹಾರಿ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗೆ 1,69,400 ರೂ.ವರ್ಗಾವಣೆ ಮಾಡಿದ್ದಾರೆ. ನಂತರ ವಂಚಕ ಇವರ ವಾಟ್ಸಪ್‍ಗೆ ಕರೆ ಮಾಡಿ ನಿಮ್ಮ ಪತಿಯ ಪ್ರತಿಮೆ ಮಾಡಿಸಲು ಸರ್ಕಾರದಿಂದ 25 ಲಕ್ಷ ಅನುದಾನ ಬರುವುದಿದ್ದು, 1.35 ಲಕ್ಷ ಹಣ ವರ್ಗಾವಣೆ ಮಾಡುವಂತೆ ತಿಳಿಸಿದ್ದಾನೆ. ಅದನ್ನು ನಂಬಿ ವಂಚಕ ಹೇಳಿದ ರೋಶನ್ ಕುಮಾರ್ ಚೌಧರಿ ಎಂಬಾತನ ಬ್ಯಾಂಕ್ ಖಾತೆಗೆ ಇವರು 1.35 ಲಕ್ಷ ಡೆಪಾಜಿಟ್ ಮಾಡಿದ್ದಾರೆ. ಮತ್ತೆ ವಂಚಕ ಇವರ ಮೊಬೈಲ್‍ಗೆ ಕರೆ ಮಾಡಿ ನಿಮ್ಮ ಮಕ್ಕಳ ಹೆಸರಿನಲ್ಲಿಯೂ ಇನ್ಸುರೆನ್ಸ್ ಮಾಡಿಸಿದ್ದು, ಕಳೆದ ಐದು ವರ್ಷಗಳಿಂದ ಹಣ ಕಟ್ಟಿರುವುದಿಲ್ಲ. ಪ್ರತಿಯೊಬ್ಬರು 84,700 ರೂ.ಕಟ್ಟಿದರೆ 17 ಲಕ್ಷ ರೂ.ಇನ್ಸುರೆನ್ಸ್ ಹಣ ಬರುತ್ತದೆ ಎಂದು ನಂಬಿಸಿದ್ದಾನೆ. ಆತನ ಮಾತನ್ನು ನಂಬಿ ಇವರು ಮತ್ತೆ ಮನೋಜ್ ಶಾ ಎಂಬಾತನ ಹೆಸರಿನಲ್ಲಿರುವ ಬ್ಯಾಂಕ್ ಸ್ಕ್ಯಾನರ್‍ಗೆ 1,69,400 ರೂ.ವರ್ಗಾವಣೆ ಮಾಡಿದ್ದಾರೆ. ಹೀಗೆ ವಂಚಕ 4,73,800 ರೂ.ಗಳನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಆನ್ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿದ್ದಾನೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.