Home ಜಿಲ್ಲೆ ಬೀದರ್‍ನ ಗೋರಖನಾಥ ಕುಂಬಾರರ ‘ಯೋಗ ಸಾಂಗತ್ಯ’ ಕೃತಿ ಲೋಕಾರ್ಪಣೆಯೋಗವನ್ನು ಮನೆ-ಮನೆಗೆ ತಲುಪಿಸುವ ಕೃತಿ: ಬಾಬಾ ರಾಮದೇವ್...

ಬೀದರ್‍ನ ಗೋರಖನಾಥ ಕುಂಬಾರರ ‘ಯೋಗ ಸಾಂಗತ್ಯ’ ಕೃತಿ ಲೋಕಾರ್ಪಣೆಯೋಗವನ್ನು ಮನೆ-ಮನೆಗೆ ತಲುಪಿಸುವ ಕೃತಿ: ಬಾಬಾ ರಾಮದೇವ್ ಮೆಚ್ಚುಗೆ

ಬೀದರ್: ಬೀದರ್‍ನ ಯೋಗ ಸಾಧಕ ಗೋರಖನಾಥ ಕುಂಬಾರ ರಚಿಸಿರುವ ‘ಯೋಗ ಸಾಂಗತ್ಯ’ ಕೃತಿಯನ್ನು ಯೋಗ ಗುರು ಬಾಬಾ ರಾಮದೇವ್ ಅವರು ಇತ್ತಿಚೀಗೆ ಉತ್ತರಾಖಂಡನಲ್ಲಿನ ಪತಂಜಲಿ ಯೋಗ ಪೀಠದಲ್ಲಿ ನಡೆದ ಯೋಗ ಶಿಕ್ಷಕರ ತರಬೇತಿ ಶಿಬಿರದಲ್ಲಿ ಲೋಕಾರ್ಪಣೆಗೊಳಿಸಿದರು.
ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಬಾಬಾ ರಾಮದೇವ್, ‘ಒತ್ತಡದ ಬದುಕಿನ ನಡುವೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗವನ್ನು ಪ್ರತಿಯೊಬ್ಬರೂ ಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊಳ್ಳಬೇಕು. ಯೋಗದ ಮಹತ್ವವನ್ನು ಸರಳವಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ‘ಯೋಗ ಸಾಂಗತ್ಯ’ ಉಪಯುಕ್ತ ಕೃತಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಯೋಗಾಸನಗಳ ಸ್ಪಷ್ಟ ಚಿತ್ರಗಳು, ಅವುಗಳ ಅರ್ಥ, ಅಭ್ಯಾಸ ವಿಧಾನ ಹಾಗೂ ಉಪಯೋಗಗಳ ಕುರಿತು ಕೃತಿಯಲ್ಲಿ ವಿವರಣೆ ನೀಡಲಾಗಿದೆ. ಯೋಗ ಕಲಿಯುವ ಆಸಕ್ತರಿಗೆ ಇದು ಕೈಪಿಡಿಯಾಗಿ ನೆರವಾಗಲಿದೆ’ ಎಂದರು.

ಪತಂಜಲಿ ಯೋಗ ಪೀಠದ ಕರ್ನಾಟಕ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಮಾತನಾಡಿ, ‘ಗೋರಖನಾಥ ಕುಂಬಾರ ಅವರು ಎರಡು ದಶಕಗಳಿಂದ ಬಾಬಾ ರಾಮದೇವ್ ಅವರ ಮಾರ್ಗದರ್ಶನದಲ್ಲಿ ಬೀದರ್ ಜಿಲ್ಲೆಯ ಶಾಲಾ-ಕಾಲೇಜುಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಉಚಿತವಾಗಿ ಯೋಗ ತರಬೇತಿ ನೀಡುತ್ತ ಬಂದಿದ್ದಾರೆ. ತಮ್ಮ ಸೇವಾ ಅನುಭವವನ್ನು ಈಗ ಕೃತಿಯ ರೂಪದಲ್ಲಿ ಜನರಿಗೆ ನೀಡಿದ್ದಾರೆ’ ಎಂದು ಶ್ಲಾಘಿಸಿದರು.
ಲೇಖಕ ಗೋರಖನಾಥ ಕುಂಬಾರ ಮಾತನಾಡಿ, ‘ಯೋಗ ಶಿಬಿರದಲ್ಲಿ ತರಬೇತಿ ಪಡೆದವರು ನಂತರವೂ ಸ್ವತಂತ್ರವಾಗಿ ಅಭ್ಯಾಸ ಮುಂದುವರಿಸಲು ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಚಿತ್ರಗಳು ಮತ್ತು ಸರಳ ವಿವರಣೆಗಳೊಂದಿಗೆ ಕೃತಿ ಸಿದ್ಧಪಡಿಸಲಾಗಿದೆ’ ಎಂದರು.
‘ಶುಭ ಸಮಾರಂಭಗಳಲ್ಲಿ ದುಬಾರಿ ಉಡುಗೊರೆಗಳ ಬದಲು ಆರೋಗ್ಯದ ಸಂದೇಶ ಸಾರುವ ‘ಯೋಗ ಸಾಂಗತ್ಯ’ ಕೃತಿಯನ್ನು ಉಡುಗೊರೆಯಾಗಿ ನೀಡಿದರೆ, ಯೋಗದ ಪ್ರಚಾರದ ಜತೆಗೆ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೂ ನೆರವಾಗಲಿದೆ’ ಎಂಬ ಆಶಯ ನಮ್ಮದಾಗಿದೆ ಎಂದರು. ಅಲ್ಲಿಯ ನೂರಾರು ಯೋಗ ಸಾಧಕರು, ಯೋಗ ಪಟುಗಳು ಕಾರ್ಯಕ್ರಮದಲ್ಲಿದ್ದರು.