
ಮೈಸೂರು.ಅ೫: ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಗಜಪಡೆಯ ನಾಯಕ ’ಕ್ಯಾಪ್ಟನ್’ ಅಭಿಮನ್ಯು ಸೋಮವಾರ ಮೈಸೂರು ಅರಮನೆ ಆವರಣವನ್ನು ವೈಭವದಿಂದ ಪ್ರವೇಶಿಸಿದ್ದಾನೆ. ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಪುಷ್ಪವೃಷ್ಟಿ ಹಾಗೂ ಮಂಗಳವಾದ್ಯಗಳೊಂದಿಗೆ ಗಜರಾಜನನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
ಅರಮನೆ ಪ್ರವೇಶದ ವೇಳೆಯಲ್ಲಿ ಅಭಿಮನ್ಯುವಿನ ಅಭಿಮಾನಿಗಳು ಆತನಿಗಾಗಿಯೇ ವಿಶೇಷವಾಗಿ ಸಿದ್ಧಪಡಿಸಿದ್ದ ೧೬೬ ಇಂಚು ಸುತ್ತಳತೆ ಹಾಗೂ ಸುಮಾರು ೮ ಕೆ.ಜಿ. ತೂಕದ ಬೃಹತ್ ’ಮೈಸೂರು ಪೇಟ’ವನ್ನು ತೊಡಿಸಿ ಗೌರವಿಸಿದರು. ಗಜರಾಜ ಪೇಟ ಧರಿಸಿ ಗಂಭೀರವಾಗಿ ಹೆಜ್ಜೆ ಹಾಕುತ್ತಿದ್ದ ದೃಶ್ಯ ನೆರೆದಿದ್ದ ಸಾರ್ವಜನಿಕರು ಹಾಗೂ ಪ್ರವಾಸಿಗರ ಕಣ್ಣುತುಂಬುವಂತೆ ಮಾಡಿತು.
ಕಳೆದ ಆರು ವರ್ಷಗಳಿಂದ ಯಶಸ್ವಿಯಾಗಿ ೭೫೦ ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊರ ವಹಿಸಿಕೊಂಡಿದ್ದ ಅಭಿಮನ್ಯುವಿಗೆ ೬೦ ವರ್ಷ ವಯಸ್ಸಾದ ಹಿನ್ನೆಲೆಯಲ್ಲಿ ಅಂಬಾರಿ ಹೊರುವ ಜವಾಬ್ದಾರಿಯಿಂದ ಮುಕ್ತಿ ನೀಡಲಾಗಿತ್ತು. ಆದರೆ, ಕೋಟ್ಯಂತರ ಅಭಿಮಾನಿಗಳ ಒತ್ತಾಯ ಹಾಗೂ ಭಾವನೆಗಳಿಗೆ ಸ್ಪಂದಿಸಿದ ಅರಣ್ಯ ಇಲಾಖೆಯು ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಅಭಿಮನ್ಯುವಿಗೆ ಗೌರವಾನ್ವಿತ ’ನಿಶಾನೆ ಆನೆ’ (ಮೆರವಣಿಗೆಯ ಮುಂಚೂಣಿ ಆನೆ)ಯಾಗಿ ಪಾಲ್ಗೊಳ್ಳಲು ವಿಶೇಷ ಅವಕಾಶ ಕಲ್ಪಿಸಿದೆ.
ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಅಭಿಮನ್ಯು ಮತ್ತು ತಂಡಕ್ಕೆ ಇಂದಿನಿಂದ ರಾಜಬೀದಿಗಳಲ್ಲಿ ತಾಲೀಮು ಹಾಗೂ ವಿಶೇಷ ಪೌಷ್ಟಿಕ ಆಹಾರೋಪಚಾರ ಕಾರ್ಯಗಳು ಆರಂಭವಾಗಲಿವೆ.

























