
ಸಂಜೆವಾಣಿ ನ್ಯೂಸ್
ಮೈಸೂರು:ಸೆ.16:-ವಸತಿ ರಹಿತ ವಿಶೇಷಚೇತನರಿಗೆ ಮೀಸಲಿಟ್ಟ ಜಮೀನನ್ನು ಅಭಿವೃದ್ಧಿಪಡಿಸುವಲ್ಲಿ ವಿಫಲವಾಗಿರುವ ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಸ್ವಾಭಿಮಾನಿ ವಿಶೇಷಚೇತನರ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ನಗರ ಪಾಲಿಕೆ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಸಮಿತಿಯ ಪದಾಧಿಕಾರಿಗಳು ಹಾಗೂ 100ಕ್ಕೂ ಹೆಚ್ಚು ವಿಶೇಷಚೇತನರು ಪ್ರತಿಭಟನೆಯಲ್ಲಿ ಭಾಗವಹಿಸಿ ಪಾಲಿಕೆ ಅಧಿಕಾರಿಗಳ ವಿರುದ್ಧ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದಡದಹಳ್ಳಿ ಸರ್ವೇ ಸಂಖ್ಯೆ 66ರಲ್ಲಿ ವಸತಿ ರಹಿತ ವಿಶೇಷಚೇತನರಿಗಾಗಿ ಮೀಸಲಿಟ್ಟಿರುವ ಸುಮಾರು 4 ಎಕರೆ ಜಮೀನನ್ನು ಅಭಿವೃದ್ಧಿಪಡಿಸುವ ಹೊಣೆಯನ್ನು ಪಾಲಿಕೆಗೆ ವಹಿಸಲಾಗಿತ್ತು. ಆದರೆ, ಅಧಿಕಾರಿಗಳು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. 2025ರ ಆ.4ರಂದು ಜಿಲ್ಲಾಧಿಕಾರಿಗಳು ಸ್ಪಷ್ಟ ಆದೇಶ ಹೊರಡಿಸಿದ್ದರೂ ಪಾಲಿಕೆ ಅಧಿಕಾರಿಗಳು ಅದನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿಗಳ ಆದೇಶಕ್ಕೂ ಬೆಲೆ ನೀಡದೆ ಪಾಲಿಕೆ ಅಧಿಕಾರಿಗಳು ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ. ಕೂಡಲೇ ನಮ್ಮ ಮನವಿಗೆ ಸ್ಪಂದಿಸಿ ವಸತಿ ರಹಿತರಿಗೆ ನಿವೇಶನ ನೀಡಬೇಕು. ಈ ಧರಣಿಗೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಅಧ್ಯಕ್ಷ ಗಿರೀಶ್.ಎಂ, ಕಾರ್ಯದರ್ಶಿ ದಿಲೀಪ್, ಖಜಾಂಚಿ ಮಹದೇವಸ್ವಾಮಿ.ಎಸ್, ಗೌರವಾಧ್ಯಕ್ಷರಾದ ರಾಮಚಂದ್ರ.ಆರ್, ಪ್ರಭುಸ್ವಾಮಿ.ಎಂ, ಉಪಾಧ್ಯಕ್ಷರಾದ ನರಸಿಂಹೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.
































