Home ಜಿಲ್ಲೆ ಮೈಸೂರು ಪ್ರಜಾಪ್ರಭುತ್ವವೇ ಭಾರತದ ಶಕ್ತಿ, ಮತದಾನ ಸಂವಿಧಾನ ನೀಡಿದ ಪ್ರಮುಖ ಹಕ್ಕು: ಶಿವಕುಮಾರ್

ಪ್ರಜಾಪ್ರಭುತ್ವವೇ ಭಾರತದ ಶಕ್ತಿ, ಮತದಾನ ಸಂವಿಧಾನ ನೀಡಿದ ಪ್ರಮುಖ ಹಕ್ಕು: ಶಿವಕುಮಾರ್

ಸಂಜೆವಾಣಿ ನ್ಯೂಸ್
ಮೈಸೂರು:ಸೆ.16:-
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಪ್ರಮುಖರಾಗಿದ್ದು, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕು ಇದೆ. ಜನರ ಮತದಾನದ ಮೂಲಕವೇ ಜನಪ್ರತಿನಿಧಿಗಳ ಆಯ್ಕೆ ನಡೆಯುತ್ತಿದ್ದು, ಮತದಾನ ಮತ್ತು ಜನರ ಭಾಗವಹಿಸುವಿಕೆಯೇ ಪ್ರಜಾಪ್ರಭುತ್ವದ ಶಕ್ತಿ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ. ಶಿವಕುಮಾರ್ ಹೇಳಿದರು.


ಕಲಾಮಂದಿರದ ಆವರಣದಲ್ಲಿ ಇರುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಅನೇಕ ಮಹನೀಯರ ಹೋರಾಟದಿಂದ ಪ್ರಜಾಪ್ರಭುತ್ವದ ಅಡಿಪಾಯ ಗಟ್ಟಿಯಾಗಿದೆ ಎಂದರು.


ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸುವುದು, ಹಕ್ಕುಗಳ ಜತೆಗೆ ಕರ್ತವ್ಯಗಳನ್ನು ಅರಿತುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಯುವಜನರು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮಹತ್ವವನ್ನು ಅರಿತು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಲೋಕೇಶ್ ಅವರು ಮಾತನಾಡಿ, ಭಾರತದ ಬಲಿಷ್ಠ ಸಂವಿಧಾನ ನಾಗರಿಕರಿಗೆ ವಾಕ್ ಸ್ವಾತಂತ್ರ್ಯ, ಆಲೋಚನಾ ಸ್ವಾತಂತ್ರ್ಯ ಹಾಗೂ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕುಗಳನ್ನು ನೀಡಿದೆ. ಆದರೆ ಈ ಹಕ್ಕುಗಳನ್ನು ಜವಾಬ್ದಾರಿಯಿಂದ ಬಳಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸ್ವಾತಂತ್ರ್ಯದ ಹೆಸರಿನಲ್ಲಿ ವ್ಯಕ್ತಿಗಳ ಅಥವಾ ಮಹಾಪುರುಷರ ಅವಹೇಳನಕ್ಕೆ ಅವಕಾಶವಿಲ್ಲ ಎಂದರು.


`ಪ್ರಜೆಗಳೇ ಪ್ರಭುಗಳು’ ಎಂಬುದು ಪ್ರಜಾಪ್ರಭುತ್ವದ ಸೊಬಗು. ಚುನಾವಣೆಯ ಮೂಲಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಾಗೂ ಅವರು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಬದಲಿಸುವ ಅಧಿಕಾರ ಜನರಿಗಿದೆ. ಯುವಜನರು ಹಕ್ಕುಗಳ ಜತೆಗೆ ಕರ್ತವ್ಯಗಳನ್ನೂ ಅರಿತುಕೊಳ್ಳಬೇಕು ಎಂದು ಹೇಳಿದರು.


ಮಾಜಿ ಮೇಯರ್ ಪುರುಷೋತ್ತಮ್ ಅವರು ಮಾತನಾಡಿ, ಹಿಂದೆ ಶಿಕ್ಷಣ, ಉದ್ಯೋಗ ಮತ್ತು ಮತದಾನದ ಹಕ್ಕಿನಲ್ಲಿ ಎಲ್ಲರಿಗೂ ಸಮಾನ ಅವಕಾಶ ಇರಲಿಲ್ಲ. ಸಂವಿಧಾನ ಜಾರಿಯಾದ ಬಳಿಕ ಸಮಾಜದ ಎಲ್ಲ ವರ್ಗಗಳಿಗೂ ಸಮಾನತೆ ಮತ್ತು ಅವಕಾಶಗಳು ದೊರೆತಿವೆ ಎಂದರು.


ಜ್ಯೋತಿರಾವ್ ಫುಲೆ, ಸಾವಿತ್ರಿಬಾಯಿ ಫುಲೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರ ಹೋರಾಟದಿಂದ ಶಿಕ್ಷಣ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಹಕ್ಕುಗಳು ಬಲಗೊಂಡಿವೆ. ಯುವಜನರು ಸಂವಿಧಾನದ ಮೌಲ್ಯಗಳನ್ನು ಅರಿತು ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಐಶ್ವರ್ಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಉಪ ನಿರ್ದೇಶಕರಾದ ಉದಯ್ ಕುಮಾರ್ , ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಂಗೇಗೌಡ, ಮುಖಂಡರಾದ ಜವರಪ್ಪ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.