Home ಜಿಲ್ಲೆ ಮೈಸೂರು ಗೃಹಲಕ್ಷ್ಮಿ ಫಲಾನುಭವಿಗಳ ಗ್ರಾಮವಾರು ಪರಿಶೀಲನೆಗೆ ಸೂಚನೆ

ಗೃಹಲಕ್ಷ್ಮಿ ಫಲಾನುಭವಿಗಳ ಗ್ರಾಮವಾರು ಪರಿಶೀಲನೆಗೆ ಸೂಚನೆ

ಸಂಜೆವಾಣಿ ವಾರ್ತೆ
ಮಂಡ್ಯ: ಸೆ.16
ಗೃಹಲಕ್ಷ್ಮಿ ಯೋಜನೆಯಡಿ ಗ್ರಾಮ ವಾರು ಫಲಾನುಭವಿಗಳ ಪಟ್ಟಿಯನ್ನು ಪಡೆದು ಸಮಗ್ರವಾಗಿ ಪರಿಶೀಲನೆ ನಡೆಸಬೇಕು.ಮರಣ ಹೊಂದಿರುವವರು ಹಾಗೂ ಅನರ್ಹ ಫಲಾನುಭವಿ ಗಳನ್ನು ಗುರುತಿಸಿ, ಅಂತಹ ವರ ಹೆಸರುಗಳನ್ನು ಯೋಜನೆಯ ಪಟ್ಟಿಯಿಂದ ಕೈಬಿಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಅಧ್ಯಕ್ಷ ಚಿಕ್ಕಲಿಂಗಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು.


ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಹಣ ಪಾವತಿಸುವ ಮುನ್ನ ಬಯೋಮೆಟ್ರಿಕ್ ಹಾಗೂ ಫೇಶಿಯಲ್ ದೃಢೀಕರಣದ ಮೂಲಕ ಫಲಾನುಭವಿಗಳ ಪರಿಶೀಲನೆ ನಡೆಸುವಂತೆ ಸರ್ಕಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಅನರ್ಹರು ಯೋಜನೆಯ ಸೌಲಭ್ಯ ಪಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳ ಲ್ಲೊಂದಾದ ಗೃಹಲಕ್ಷ್ಮಿ ಯೋಜನೆಯು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಜೂನ್ 2026ರ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ ಒಟ್ಟು 4,66,540 ಫಲಾನುಭವಿ ಗಳು ನೋಂದಣಿಯಾಗಿದ್ದು, ಈ ಪೈಕಿ 4,36,296 ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 32 ಕಂತುಗಳ ಮೂಲಕ ಒಟ್ಟು 87.25 ಕೋಟಿ ಅನುದಾನವನ್ನು ನೇರವಾಗಿ ಜಮೆ ಮಾಡ ಲಾಗಿದೆ ಎಂದು ಅಧಿಕಾರಿ ಗಳು ಸಭೆಗೆ ಮಾಹಿತಿ ನೀಡಿದರು.


ಅನ್ನಭಾಗ್ಯ ಯೋಜನೆಯಡಿ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಅನ್ನ ಸುವಿಧಾ ವ್ಯವಸ್ಥೆಯಲ್ಲಿ ನೋಂದಣಿ ಯಾಗಿದ್ದರೆ, ಅವರಿಗೆ ಮನೆ ಬಾಗಿಲಿಗೆ ಪಡಿತರ ವಿತರಿಸುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.ಇದರಿಂದ ವಯೋವೃದ್ಧರು ನ್ಯಾಯಬೆಲೆ ಅಂಗಡಿಗಳಿಗೆ ತೆರಳುವ ತೊಂದರೆ ತಪ್ಪಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಐಟಿ ಪಾವತಿದಾರರು ಹಾಗೂ ನಾಲ್ಕು ಚಕ್ರದ ವಾಹನ ಹೊಂದಿರುವವರು ಸೇರಿದಂತೆ ನಿಯಮಾನು ಸಾರ ಅನರ್ಹರಾಗಿರುವವರು ಹೊಂದಿರುವ ಪಡಿತರ ಚೀಟಿಗಳನ್ನು ಪರಿಶೀಲಿಸಿ, ನಿಯಮಾನುಸಾರ ರದ್ದುಪಡಿಸಲಾಗುತ್ತಿದೆ. ಅರ್ಹ ಫಲಾನುಭವಿಗಳು ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪಡಿತರ ಸೌಲಭ್ಯ ಪಡೆಯಬಹುದಾಗಿದೆ.


ನ್ಯಾಯಬೆಲೆ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ಅಗತ್ಯ ಮಾಹಿತಿಗಳು ಸ್ಪಷ್ಟವಾಗಿ ಗೋಚರಿಸುವಂತೆ ಮಾಹಿತಿ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಸರ್ಕಾರ ನಿಗದಿಪಡಿಸಿರುವ ದರ, ಫಲಾನುಭವಿಗಳಿಗೆ ನೀಡ ಬೇಕಾದ ಪಡಿತರ ಪ್ರಮಾಣ ಸೇರಿದಂತೆ ಅಗತ್ಯ ಮಾಹಿತಿ ಗಳನ್ನು ಫಲಕದಲ್ಲಿ ನಮೂದಿಸುವಂತೆ ಕ್ರಮ ವಹಿಸಬೇಕು ಎಂದು ಚಿಕ್ಕಲಿಂಗಯ್ಯ ಅವರು ಸೂಚಿಸಿದರು.
ನಕಲಿ ಹಾಗೂ ಅನರ್ಹ ಪಡಿತರ ಚೀಟಿಗಳನ್ನು ತಡೆಗಟ್ಟುವ ಉದ್ದೇಶದಿಂದ ಜಿಲ್ಲೆಗೆ 9,76,250 ಇ-ಕೆವೈಸಿ ಗುರಿ ನಿಗದಿಪಡಿಸಲಾಗಿದೆ. ಈಗಾಗಲೇ ಶೇ.27.10ರಷ್ಟು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬಾಕಿ ಇರುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸ ಬೇಕು. ತಾಲ್ಲೂಕುವಾರು ಇ-ಕೆವೈಸಿ ಪ್ರಗತಿ ಪಟ್ಟಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.


ಯುವನಿಧಿ ಯೋಜನೆಯಡಿ ಜುಲೈ 2026ರ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ ಒಟ್ಟು 10,562 ಅಭ್ಯರ್ಥಿಗಳು ನೋಂದಣಿಯಾಗಿದ್ದಾರೆ. ಈ ಪೈಕಿ 9,912 ಫಲಾನುಭವಿಗಳಿಗೆ 99,454 ಕಂತುಗಳ ಮೂಲಕ ಒಟ್ಟು ?29.58 ಕೋಟಿ ಅನುದಾನವನ್ನು ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಕರ್ನಾಟಕ ಸರ್ಕಾರ 2023ರಿಂದ ಜಾರಿಗೊಳಿಸಿರುವ ಶಕ್ತಿ ಯೋಜನೆಯಡಿ ಜುಲೈ 2026ರ ಅಂತ್ಯದವರೆಗೆ ಮಂಡ್ಯ ಜಿಲ್ಲೆಯಲ್ಲಿ 23,60,21,312 ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣದ ಸೌಲಭ್ಯ ಪಡೆದುಕೊಂಡಿದ್ದಾರೆ. ಇದರ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 662.65 ಕೋಟಿ ಆದಾಯ ದಾಖಲಾಗಿದೆ ಎಂದು ಕೆಎಸ್‍ಆರ್‍ಟಿಸಿ ಅಧಿಕಾರಿ ಗಳು ಸಭೆಗೆ ಮಾಹಿತಿ ನೀಡಿದರು.


ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಕೆ. ಹನುಮಂತಯ್ಯ,ರಾಜೇಂದ್ರ ಪ್ರಸಾದ್, ಪ್ರಶಾಂತ್ ಬಾಬು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.