Home ಜಿಲ್ಲೆ ಮೈಸೂರು ವಾಕ್, ಶ್ರವಣ ದೋಷಕ್ಕೆ ಚಿಕಿತ್ಸೆ ಅಗತ್ಯ: ಬಸವರಾಜ ರಾಯರೆಡ್ಡಿ

ವಾಕ್, ಶ್ರವಣ ದೋಷಕ್ಕೆ ಚಿಕಿತ್ಸೆ ಅಗತ್ಯ: ಬಸವರಾಜ ರಾಯರೆಡ್ಡಿ

ಸಂಜೆವಾಣಿ ನ್ಯೂಸ್
ಮೈಸೂರು:ಸೆ.16:-
ವಾಕ್ ಮತ್ತು ಶ್ರವಣ ದೋಷಗಳಿಂದ ಬಳಲುತ್ತಿರುವವರ ಸಮಸ್ಯೆ ನಿವಾರಿಸಿ ಉತ್ತಮ ವೈದ್ಯಕೀಯ ಸೇವೆ ನೀಡಲು ಸೂಕ್ತ ತರಬೇತಿ ಒದಗಿಸುವುದು ಅತ್ಯಗತ್ಯ ಎಂದು ಉನ್ನತ ಶಿಕ್ಷಣ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.


ಜೆಎಸ್‍ಎಸ್ ಮಹಾವಿದ್ಯಾಪೀಠ ಮಂಗಳವಾರ ಜೆಎಸ್‍ಸ್ ಆಸ್ಪತ್ರೆಯ ಶ್ರೀರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಜೆಎಸ್‍ಎಸ್ ವಾಕ್ ಮತ್ತು ಶ್ರವಣ ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವ ಉದ್ಘಾಟಿಸಿ ಅವರು ಮತನಾಡಿದರು.
ದೇಶದಲ್ಲಿ ವಿವಿಧ ರೀತಿಯ ಶ್ರವಣ ಸಮಸ್ಯೆ ಎದುರಿಸುತ್ತಿರುವವರ ಸಂಖ್ಯೆ ಸಣ್ಣದಲ್ಲ. ನವಜಾತ ಶಿಶುವಿನಿಂದ ಹಿಡಿದು ವಯಸ್ಕರವರೆಗೂ ಇದು ಕಾಣಿಸಿಕೊಳ್ಳುತ್ತಿದೆ. ವಿಶ್ವದಲ್ಲಿ 150 ಕೋಟಿಗೂ ಹೆಚ್ಚು ಜನರು ಈ ಸಮಸ್ಯೆ ಎದುರಿಸುತ್ತಿದ್ದು, ಭಾರತದಲ್ಲಿ 43 ಕೋಟಿ ಜನ ವಾಕ್, ಶ್ರವಣ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕರ್ನಾಟಕದಲ್ಲಿ 6.5 ಲಕ್ಷ ಜನರಿಗೆ ಸಮಸ್ಯೆ ಇದೆ. ಇದನ್ನು ಆರಂಭದಲ್ಲಿಯೇ ಗುರುತಿಸಿ ಸಮಸ್ಯೆ ನಿವಾರಿಸಬಹುದು. ಆದರೆ, ಎಷ್ಟು ಜನರಿಗೆ ಸಮಸ್ಯೆಯನ್ನು ಎಲ್ಲಿ ಸರಿ ಪಡಿಸಬೇಕು ಎನ್ನುವುದೇ ತಿಳಿಯದೆ ಬಳಲುತ್ತಿರುತ್ತಾರೆ ಎಂದು ಹೇಳಿದರು.


ಹೀಗಾಗಿ ವಾಕ್ ಮತ್ತು ಶ್ರವಣ ಸಮಸ್ಯೆ ನಿವಾರಣೆಗೆ ತಜ್ಞರು ಇನ್ನಷ್ಟು ಬರಬೇಕಿದೆ. ತಜ್ಞರಿಗೆ ಉತ್ತಮ ವೈದ್ಯಕೀಯ ಸೇವೆ ನೀಡಲು ಸೂಕ್ತ ತರಬೇತಿ ನೀಡುವ ಮೂಲಕ ತಜ್ಞರನ್ನು ತಯಾರು ಮಾಡಬೇಕು. ಜತೆಗೆ ಸಮಸ್ಯೆ ಇರುವವರಿಗೆ ಈ ಮೂಲಕ ಸಾಧ್ಯವಾದಷ್ಟು ಸಹಾಯ ಮಾಡಬೇಕು. ಇದು ಕೇವಲ ವೈದ್ಯಕೀಯ ಸೇವೆಯಾಗಿರದೆ ಮಾನವೀಯ ಸೇವೆ ಎಂದು ಪರಿಗಣಿಸಿಬೇಕು. ಕಳೆದ ಇಪ್ಪತ್ತೈದು ವರ್ಷಗಳಿಂದ ಈ ರೀತಿಯ ಮಾನವೀಯ ಸೇವೆ ಮಾಡುತ್ತಿರುವ ಜೆಎಸ್‍ಎಸ್ ಸಂಸ್ಥೆಗಳ ಕಾರ್ಯ ನಿಜವಾಗಿಯೂ ಶ್ಲಾಘನೀಯ ಎಂದು ಬಣ್ಣಿಸಿದರು.


ರಾಜ್ಯದಲ್ಲಿ ಕೆ.ಜಿಯಿಂದ ಯುಜಿ ವರಗೆ 1.55 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದು, ಶೇ.45ರಷ್ಟು ಮಠಮಾನ್ಯಗಳು, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತ್ತಿದ್ದಾರೆ. ಶಿಕ್ಷಣಕ್ಕಾಗಿ ಈ ಸಾಲಿನ ಬಜೆಟ್‍ನಲ್ಲಿ 55 ಸಾವಿರ ಕೋಟಿ ರೂ. ಅನ್ನು ಮೀಸಲಿಸಲಾಗಿದೆ. ಆದರೆ ಬಜೆಟ್‍ನ ಶೇ.90ರಷ್ಟು ಹಣ ಕೇವಲ ವೇತನಕ್ಕೆ ಬಳಸಬೇಕಾಗಿದೆ. ಇಂತಹ ಸನ್ನಿವೇಶದಲ್ಲಿ ಮಠಮಾನ್ಯಗಳು, ಖಾಸಗಿ ಸಂಸ್ಥೆಗಳ ಶಿಕ್ಷಣ ನೀಡುವ ಮೂಲಕ ವಾಕ್ ಮತ್ತು ಶ್ರವಣ ಸಮಸ್ಯೆ ನಿವಾರಿಸುವ ತಜ್ಞರನ್ನು ತಯಾರಿಸುವ ಕಾರ್ಯ ಆಗಬೇಕು ಎಂದು ಅಭಿಪ್ರಾಯಪಟ್ಟರು.


ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಪಂಚೇಂದ್ರಿಯಗಳಲ್ಲಿ ಒಂದು ನ್ಯೂನ್ಯತೆ ಇದ್ದರೂ ತೊಂದರೆಗೆ ಒಳಗಾಗುತ್ತಾನೆ. ಆದರೆ ಅಂತಹವರಿಗೆ ದೇವರು ಒಂದು ದಿವ್ಯಶಕ್ತಿ ನೀಡಿರುತ್ತಾರೆ. ವಾಕ್ ಮತ್ತು ಶ್ರವಣ ಸಂಸ್ಥೆ ಬೇಕು, ಬೇಡ ಎನ್ನುವ ಚರ್ಚೆಯ ನಡುವೆಯೇ ಆರಂಭಿಸಿ ಈಗ ಚಿಕಿತ್ಸೆ ನೀಡುವವರನ್ನು ಸಮಾಜಕ್ಕೆ ಕೊಡುಗೆ ನೀಡುತ್ತಾ 25 ವರ್ಷ ಬೆಳೆದ ಬಂದಿದೆ ಎಂದು ಹೇಳಿದರು.


ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪೆÇ್ರ. ಎಸ್.ಆರ್.ನಿರಂಜನ, ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪೆÇ್ರ.ಎ.ಪಿ.ಜ್ಞಾನಪ್ರಕಾಶ್, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಿರ್ದೇಶಕಿ ಡಾ.ಪುಷ್ಪಾವತಿ, ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಠಸೂರ ಮಠ, ಆಶಾ ಬಿ.ರಾಯರೆಡ್ಡಿ, ಜೆಎಸ್‍ಎಸ್ ವಿದ್ಯಾಪೀಠದ ಕಾರ್ಯದರ್ಶಿ ಡಾ.ಎಸ್.ಪಿ.ಮಂಜುನಾಥ್, ಜೆಎಸ್‍ಎಸ್ ವಾಕ್ ಮತ್ತು ಶ್ರವಣ ಸಂಸ್ಥೆ ಪ್ರಾಂಶುಪಾಲೆ ಆರ್.ಸುಮಾ, ಸಂಸ್ಥೆಯ ಆರ್.ಮಹೇಶ್, ಡಾ.ನಟರಾಜ್, ಡಾ. ಡಿ.ಎಸ್.ಪ್ರತಿಮಾ ಇತರರು ಇದ್ದರು.