Home ಜಿಲ್ಲೆ ಸತೀಶ್ ಜಾರಕಿಹೊಳಿ ಮೇಲಿನ ಇಡಿ ದಾಳಿ ಅಹಿಂದ ನಾಯಕರ ಖಂಡನೆ

ಸತೀಶ್ ಜಾರಕಿಹೊಳಿ ಮೇಲಿನ ಇಡಿ ದಾಳಿ ಅಹಿಂದ ನಾಯಕರ ಖಂಡನೆ

ಬೀದರ: ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲಿನ ಜಾರಿ ನಿರ್ದೇಶನಾಲಯ (ಇಡಿ) ದಾಳಿ ಹಾಗೂ ತನಿಖಾ ಕ್ರಮಗಳನ್ನು ಖಂಡಿಸಿ ಅಹಿಂದ ಮುಖಂಡರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಯಿತು.

ಅಹಿಂದ ನಾಯಕರಾದ ಶಂಕರರಾವ ದೊಡ್ಡಿ ಅವರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಕೇಂದ್ರ ತನಿಖಾ ಸಂಸ್ಥೆಗಳನ್ನು ರಾಜಕೀಯ ದ್ವೇಷ ಅಥವಾ ಪ್ರತಿಪಕ್ಷದ ನಾಯಕರನ್ನು ಗುರಿಯಾಗಿಸುವ ಸಾಧನಗಳಾಗಿ ಬಳಸಬಾರದು ಎಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಜನಪ್ರತಿನಿಧಿಗಳ ವಿರುದ್ಧ ಯಾವುದೇ ತನಿಖೆ ನಡೆದರೂ ಅದು ನಿಷ್ಪಕ್ಷಪಾತ, ಪಾರದರ್ಶಕ ಹಾಗೂ ಕಾನೂನುಬದ್ಧವಾಗಿ ನಡೆಯಬೇಕು. ಆರೋಪಗಳಿದ್ದಲ್ಲಿ ಸೂಕ್ತ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕಾನೂನು ಪ್ರಕಾರ ತನಿಖೆ ನಡೆಸಲಿ; ಆದರೆ ತನಿಖಾ ಸಂಸ್ಥೆಗಳ ಮೂಲಕ ರಾಜಕೀಯ ಒತ್ತಡ ಹೇರುವ ಅಥವಾ ಜನಪ್ರತಿನಿಧಿಗಳ ರಾಜಕೀಯ ಧ್ವನಿಯನ್ನು ಅಡಗಿಸುವ ಪ್ರಯತ್ನ ಸಲ್ಲದು ಎಂದು ಹೇಳಿದರು.

ಕೇಂದ್ರ ತನಿಖಾ ಸಂಸ್ಥೆಗಳಾದ ಇಡಿ ಮತ್ತು ಸಿಬಿಐಗಳ ಸ್ವಾಯತ್ತತೆ ಹಾಗೂ ವಿಶ್ವಾಸಾರ್ಹತೆಯನ್ನು ಕಾಪಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು. ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷವನ್ನು ಆಯ್ದ ರೀತಿಯಲ್ಲಿ ಗುರಿಯಾಗಿಸುವ ಕ್ರಮಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುತ್ತವೆ ಎಂದು ಮುಖಂಡರು ಅಭಿಪ್ರಾಯಪಟ್ಟರು.

ಸತೀಶ್ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಗುರಿಯಾಗಿಸುವ ಯಾವುದೇ ಕ್ರಮವನ್ನು ಖಂಡಿಸುವುದಾಗಿ ತಿಳಿಸಿದ ಮುಖಂಡರು, ತನಿಖಾ ಸಂಸ್ಥೆಗಳ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಮೂಡಿರುವ ಅನುಮಾನಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

“ಪ್ರಜಾಪ್ರಭುತ್ವ, ಸಂವಿಧಾನ, ಅಭಿವ್ಯಕ್ತಿ ಸ್ವಾತಂ?????? ಹಾಗೂ ರಾಜಕೀಯ ಭಿನ್ನಾಭಿಪ್ರಾಯಗಳಿಗೆ ಗೌರವ ನೀಡುವ ವಾತಾವರಣ ನಿರ್ಮಾಣವಾಗಬೇಕು. ತನಿಖಾ ಸಂಸ್ಥೆಗಳ ದುರ್ಬಳಕೆಗೆ ಅವಕಾಶ ನೀಡಬಾರದು” ಎಂದು ಒತ್ತಾಯಿಸಿದರು.

ಪಂಡಿತ ಚಿದ್ರಿ ಅಹಿಂದ ಮುಖಂಡರು ಮಾತಾನಾಡಿ ರಾಜ್ಯದ ಅಹಿಂದ ನಾಯಕರ ಏಳಿಗೆ ಸಹಿಸದೆ ಮಾಡಿರುವ ದಾಳಿ ಎಂದು ಹೇಳಬಹುದು ಎಂದು ಅಭಿಪ್ರಾಯಪಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಮಾನವ ಬಂಧುತ್ವ ವೇದಿಕೆ ಮುಖಂಡ ಮಹೇಶ ಗೋರನಾಳಕರ್ , ಇಡಗಾರ ಸಮಾಜದ ಮುಖಂಡ ರಾಜಕುಮಾರ ಎನ್.ಪಾಟೀಲ್, ಹಾಗೂ ಲಿಂಗಾಯತ ಪ್ರಗತಿಪರ ಚಿಂತಕ ಜಗದೀಶ್ವರ ಬಿರಾದರ ಉಪಸ್ಥಿತರಿದ್ದರು.

ಸತೀಶ್ ಜಾರಕಿಹೊಳಿ ಅವರ ಮೇಲಿನ ಇಡಿ ಕ್ರಮವನ್ನು ಖಂಡಿಸಿ, ರಾಜಕೀಯ ಸೇಡಿನ ಕ್ರಮಗಳಿಗೆ ಕಡಿವಾಣ ಹಾಕಿ ತನಿಖಾ ಸಂಸ್ಥೆಗಳ ನಿಷ್ಪಕ್ಷಪಾತತೆಯನ್ನು ಖಾತ್ರಿಪಡಿಸಬೇಕು ಎಂದು ಆಗ್ರಹಿಸಲಾಯಿತು.