
ಯಾದಗಿರಿ: ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದರೂ, ಸರ್ಕಾರ ಕೆಲವೇ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಮೂಲಕ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಆರೋಪಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಶೇ.೭೫ರಷ್ಟು ಪ್ರದೇಶ ಬರದಿಂದ ಬಾಧಿತವಾಗಿದೆ. ಆದರೆ, ರಾಜ್ಯ ಸರ್ಕಾರ ಆಯ್ದ ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿದೆ. ಕಲಬುರಗಿ ಜಿಲ್ಲೆಯಲ್ಲಿ ಒಂದೂ ತಾಲೂಕು ಬರಗಾಲ ಪಟ್ಟಿಗೆ ಸೇರ್ಪಡೆಯಾಗಿಲ್ಲ. ರಾಯಚೂರು, ಗದಗ, ಬೆಳಗಾವಿ, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಬೆಳೆಹಾನಿಯಾಗಿದ್ದರೂ ಸರ್ಕಾರ ಅವೈಜ್ಞಾನಿಕವಾಗಿ ವರದಿ ಸಿದ್ಧಪಡಿಸಿಕೊಂಡಿದೆ ಎಂದು ದೂರಿದರು.
ರಾಜ್ಯದ ೧೩೨ ತಾಲೂಕುಗಳಲ್ಲಿ ಹಲವು ಕಡೆ ಅಂತರ್ಜಲ ಮಟ್ಟ ಸಾವಿರ ಅಡಿಗೂ ಕೆಳಗೆ ಕುಸಿದಿದ್ದು, ಕುಡಿಯುವ ನೀರು ಹಾಗೂ ಕೃಷಿಗೆ ನೀರಿನ ಸಮಸ್ಯೆ ಎದುರಾಗಿದೆ. ಮಳೆಗಾಲದಲ್ಲಿಯೂ ಹಲವು ತಾಲೂಕುಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಯಾದಗಿರಿ ಜಿಲ್ಲೆಯ ಗುರುಮಠಕಲ್, ಯಾದಗಿರಿ ಹಾಗೂ ಸುರಪುರ ತಾಲೂಕುಗಳು ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿದ್ದರೂ ಅವುಗಳನ್ನು ಬರಪೀಡಿತ ಎಂದು ಘೋಷಿಸದಿರುವುದು ಅನ್ನದಾತರಿಗೆ ಮಾಡುತ್ತಿರುವ ಅನ್ಯಾಯ ಎಂದು ಕಿಡಿಕಾರಿದರು.
೨೦೨೨ರಲ್ಲಿ ರಾಜ್ಯದಲ್ಲಿ ಬರಗಾಲ ಆವರಿಸಿದ್ದ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಆಗ ಎನ್‌ಡಿಆರ್‌ಎಫ್ ನಿಯಮಾವಳಿಯಡಿ ?೮,೫೦೦ ಹಾಗೂ ಹೆಚ್ಚುವರಿಯಾಗಿ ?೧೦ ಸಾವಿರ ಸೇರಿ ಒಟ್ಟು ?೧೮,೫೦೦ರಂತೆ ಪ್ರತಿ ಎಕರೆಗೆ ಪರಿಹಾರ ನೀಡಲಾಗಿತ್ತು. ಸುಮಾರು ೩೮ ಲಕ್ಷ ರೈತರಿಗೆ ಪರಿಹಾರ ಒದಗಿಸಲಾಗಿತ್ತು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗಿರುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಬೇಕಿತ್ತು. ಆದರೆ, ಸಚಿವರು ಹಾಗೂ ಶಾಸಕರು ಸೂಚಿಸಿದ ತಾಲೂಕುಗಳನ್ನು ಮಾತ್ರ ಬರ ಪಟ್ಟಿಗೆ ಸೇರ್ಪಡೆ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬರ ಪರಿಸ್ಥಿತಿ ಎದುರಾದಾಗ ಕೇಂದ್ರ ಸರ್ಕಾರ ಶೇ.೭೫ ಹಾಗೂ ರಾಜ್ಯ ಸರ್ಕಾರ ಶೇ.೨೫ರಷ್ಟು ಪರಿಹಾರ ಭರಿಸುವ ವ್ಯವಸ್ಥೆಯಿದೆ. ಹೀಗಾಗಿ ರಾಜ್ಯ ಸರ್ಕಾರ ರಾಜಕೀಯ ಲಾಭ-ನಷ್ಟ ನೋಡದೆ ವೈಜ್ಞಾನಿಕವಾಗಿ ಬರ ಪರಿಸ್ಥಿತಿಯನ್ನು ಅಂದಾಜಿಸಿ, ಅರ್ಹ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ ಅವರು, ಮುಖ್ಯಮಂತ್ರಿ ಕೂಡಲೇ ಪ್ರಸ್ತುತ ಬರಗಾಲ ಪಟ್ಟಿಯನ್ನು ಮರುಪರಿಶೀಲಿಸಿ, ಸಮಗ್ರ ಅಧ್ಯಯನ ನಡೆಸಿ ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ಹೊಸ ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹೇಶರಡ್ಡಿ ಮುದ್ನಾಳ್, ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ ಹಾಗೂ ವೆಂಕಟರಡ್ಡಿ ಅಬ್ಬೆತುಮಕೂರ ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾಟಾಚಾರಕ್ಕೆಂಬAತೆ ಬರ ಅಧ್ಯಯನ ನಡೆಸುತ್ತಿದ್ದಾರೆ. ಕರ್ನಾಟಕದ ಸ್ಥಿತಿಗತಿಗಳ ಬಗ್ಗೆ ಕೇಂದ್ರದ ಗಮನ ಸೆಳೆಯಲಿ. ರಾಜ್ಯದಲ್ಲಿ ಬಿಜೆಪಿ ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕೆಲಸ ಮಾಡುತ್ತಿದೆ.”
- ಎನ್.ರವಿಕುಮಾರ, ವಿಧಾನ ಪರಿಷತ್ ಸದಸ್ಯ





























