
ರಾಯಚೂರು.ಸೆ.೨ –ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದ್ದು,ಇಂದು ಮಸ್ಕಿ ವಿಧಾನಸಭಾ ಕ್ಷೇತ್ರದ ಸಂತೆಕಲ್ಲೂರು ಸರ್ಕಲ್ನಿಂದ ಗುಡದೂರುವರೆಗೆ ಪಾದಯಾತ್ರೆ ಸಾಗಿದೆ.
ನಿನ್ನೆ ಲಿಂಗಸುಗೂರಿನಿಂದ ಆರಂಭಗೊಂಡಿದ್ದ ಪಾದಯಾತ್ರೆ ಮಸ್ಕಿಯ ಸಂತೆಕಲ್ಲೂರು ಸರ್ಕಲ್ ಬಳಿ ಮೊದಲ ದಿನದ ಕಾರ್ಯಕ್ರಮ ಮುಕ್ತಾಯಗೊಳಿಸಿತ್ತು. ಇಂದು ಬೆಳಗ್ಗೆ ೯ ಗಂಟೆಗೆ ಸಂತೆಕಲ್ಲೂರು ಸರ್ಕಲ್ನಿಂದ ಪಾದಯಾತ್ರೆ ಪುನರಾರಂಭಗೊಂಡಿದ್ದು,ಮಸ್ಕಿ ಪಟ್ಟಣದ ಮೂಲಕ ಪಾದಯಾತ್ರೆ ಮುಂದುವರೆದಿದೆ.
ಪಾದಯಾತ್ರೆಯ ಹಿನ್ನೆಲೆಯಲ್ಲಿ ಮಸ್ಕಿ ಪಟ್ಟಣದ ಹಲವು ಕಡೆ ಬಿಜೆಪಿ ಕಾರ್ಯಕರ್ತರು ಪಕ್ಷದ ಬ್ಯಾನರ್ಗಳು, ಬಾವುಟಗಳು ಹಾಗೂ ಕಟೌಟ್ಗಳನ್ನು ಅಳವಡಿಸಿದ್ದಾರೆ. ದಾರಿಯುದ್ದಕ್ಕೂ ಬಿಜೆಪಿ ಕಾರ್ಯಕರ್ತರು ಹಾಗೂ ಪಕ್ಷದ ಧ್ವಜಗಳು ಕಂಡುಬರುತ್ತಿದ್ದು, ಮೊದಲ ದಿನದ ಪಾದಯಾತ್ರೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ.
ಇಂದಿನ ಪಾದಯಾತ್ರೆ ಸಂತೆಕಲ್ಲೂರಿನಿಂದ ಗುಡದೂರುವರೆಗೆ ಒಟ್ಟು ಸುಮಾರು ೨೨ ಕಿಲೋಮೀಟರ್ ನಡೆಯಲಿದ್ದು, ಈಗಾಗಲೇ ಮುದಬಾಳ ಕ್ರಾಸ್ ತಲುಪಿದ್ದು, ಪಾದಯಾತ್ರೆಯಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಮಾಜಿ ಸಚಿವ ಬಿ. ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಬಂಗಾರು ಹನುಮಂತು ಸೇರಿದಂತೆ ಮಸ್ಕಿ, ಮಾನ್ವಿ, ಹುನಗುಂದ, ಕುಷ್ಟಗಿ, ಲಿಂಗಸುಗೂರು ಹಾಗೂ ಮುದ್ದೇಬಿಹಾಳ ಹಾಗೂ ವಿವಿಧ ಭಾಗಗಳ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದಾರೆ. ಅಲ್ಲದೆ, ಬೇರೆ ಜಿಲ್ಲೆಗಳ ಬಿಜೆಪಿ ಶಾಸಕರು, ಮುಖಂಡರು ಹಾಗೂ ಪಕ್ಷದ ನಾಯಕರು ಕೂಡ ಪಾದಯಾತ್ರೆಗೆ ಸಾಥ್ ನೀಡಿದ್ದಾರೆ.
ಈ ಮಧ್ಯೆ ಸಂತೆಕಲ್ಲೂರು ಸರ್ಕಲ್ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ,ನಾಗೇಂದ್ರ ಅವರೇನೋ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರಬಹುದು. ಆದರೆ, ಲೂಟಿ ಮಾಡಿದ ಹಣ ವಾಲ್ಮೀಕಿ ನಿಗಮದ ಖಾತೆಗೆ ವಾಪಸ್ ಬಂದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು
ರೈತರು ಇವತ್ತು ಭೀಕರ ಬರಗಾಲ ಎದುರಿಸುತ್ತಿದ್ದಾರೆ. ೨೦೦ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ತೀವ್ರ ಬರಗಾಲ ಇದ್ದರೂ ೧೦೧ ತಾಲ್ಲೂಕನ್ನು ಮಾತ್ರ ಬರಪೀಡಿತ ಪ್ರದೇಶ ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ರಾಜ್ಯ ಸರಕಾರ, ಮುಖ್ಯಮಂತ್ರಿಗಳು ಮತ್ತು ಅವರ ಸಚಿವ ಸಂಪುಟದ ಸದಸ್ಯರಿಗೆ ವಾಸ್ತವಿಕ ಸತ್ಯ ಏನು? ರೈತರು ಯಾವ ರೀತಿ ಸಂಕಷ್ಟದಲ್ಲಿದ್ದಾರೆ ಎಂಬುದರ ಜ್ಞಾನೋದಯ ಆದಂತಿಲ್ಲ ಎಂದು ಟೀಕಿಸಿದರು.
ಲಿಂಗಸುಗೂರು, ರಾಯಚೂರು, ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಒಂದು ಸಾವಿರ ಅಡಿ ಕೊಳವೆಬಾವಿ ತೋಡಿದರೂ ಒಂದು ಹನಿ ನೀರು ಬರುತ್ತಿಲ್ಲ. ಬರ ಪರಿಹಾರವನ್ನೂ ಕೊಟ್ಟಿಲ್ಲ. ಮಾತೆತ್ತಿದರೆ ಕೇಂದ್ರ ಸರಕಾರದತ್ತ ತೋರಿಸುವ ಮುಖ್ಯಮಂತ್ರಿಗಳೇ, ನಿಮ್ಮ ಸರಕಾರ ಏನು ಕತ್ತೆ ಕಾಯುವುದಕ್ಕೆ ಇದೆಯೇ ಎಂದು ರಾಜ್ಯದ ರೈತರು ಕೇಳುತ್ತಿದ್ದಾರೆ ಎಂದರು

ಒಂದು ಕಡೆ ದಲಿತರ ಹಣ ಲೂಟಿ ಮಾಡುತ್ತ ಇದ್ದೀರಿ. ಮಹಿಳೆಯರಿಗೆ ಇವತ್ತು ಅನ್ಯಾಯ ಮಾಡುತ್ತ ಇದ್ದೀರಿ. ದುಡಿಯುವ ಯುವಜನತೆಗೆ ಕೆಲಸ ಇಲ್ಲ; ಮತ್ತೊಂದು ಕಡೆ ಭ್ರಷ್ಟಾಚಾರ. ಭ್ರಷ್ಟ, ಜನವಿರೋಧಿ, ದಲಿತವಿರೋಧಿ, ರೈತವಿರೋಧಿ ಕಾಂಗ್ರೆಸ್ ಸರಕಾರವನ್ನು ಬುಡಸಮೇತ ಕಿತ್ತು ಹಾಕುವ ಸಂಕಲ್ಪವನ್ನು ನಾವು, ನೀವು ಸೇರಿ ಮಾಡಬೇಕಿದೆ ಎಂದು ತಿಳಿಸಿದರು.
ಮೊದಲ ದಿನದ ಪಾದಯಾತ್ರೆ ಯಶಸ್ಸಿಗಾಗಿ ಪಕ್ಷದ ಎಲ್ಲ ಹಿರಿಯ ನಾಯಕರು, ಜಿಲ್ಲಾಧ್ಯಕ್ಷರಿಗೆ, ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರಿಗೆ, ಸಂಸದರು, ಮಾಜಿ ಸಂಸದರಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಪಾದಯಾತ್ರೆ ನಡುವೆ ಬರ ಅಧ್ಯಯನ
ಎರಡನೇ ದಿನದ ಇಂದಿನ ಬಳ್ಳಾರಿ ಚಲೋ ಪಾದಯಾತ್ರೆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬರದಿಂದ ಸಂಕಷ್ಟದಲ್ಲಿರುವ ರೈತರ ಅಹವಾಲು ಆಲಿಸಿ ಹೊಲಗಳಿಗೆ ಭೇಟಿ ನೀಡಿ ಸಜ್ಜೆ ಸೇರಿ ಇತರೆ ಬೆಳೆ ಹಾನಿ ವೀಕ್ಷಿಸಿದರು.
ರಾಯಚೂರಿನ ಬೇಡರ ಕಾರ್ಲುಕುಂಟಿ ರಸ್ತೆ ಬಳಿ ಹೊಲಗಳಲ್ಲಿ ಬೆಳೆ ಹಾನಿ ವೀಕ್ಷಣೆ ವೇಳೆ ಬರ ಪರಿಸ್ಥಿತಿಯಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು.
ಈ ವೇಳೆ ಮಾಜಿ ಸಚಿವರಾದ ಶ್ರೀರಾಮುಲು ಹಾಗೂ ರಾಜುಗೌಡ ಕೂಡ ಬರ ಪರಿಸ್ಥಿತಿ ವೀಕ್ಷಿಸಿ ರೈತರ ಜೊತೆಗೆ ಸಮಾಲೋಚನೆ ನಡೆಸಿದರು.































