
ವಿಜಯಪುರಆ.೨೯-ಪ್ರಾಮಾಣಿಕತೆ ಯಿಂದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಉತ್ತಮ ವಾತಾವರಣದಲ್ಲಿ ಕಾರ್ಯನಿರ್ವಹಿಸುವಂತೆ ಪ್ರತಿಯೊಬ್ಬರಿಗೂ ಸ್ಪಂದಿಸಿ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ತಿಳಿಸಿದರು.
ಇಲ್ಲಿನ ದೇವನಹಳ್ಳಿ ರಸ್ತೆಯ ಗಿರಿಜಾ ಶಂಕರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಖಾಸಗಿ ಶಿಕ್ಷಣ ಆಡಳಿತ ಮಂಡಳಿ ಸದಸ್ಯರು ಹಾಗೂ ಶಿಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ೨೫ ವರ್ಷಗಳಿಂದ ಶಿಕ್ಷಕರು ನನ್ನ ಮೇಲೆ ಭರವಸೆಯಿಟ್ಟು ಮತ ನೀಡುತ್ತಾ ಬಂದಿದ್ದಾರೆ. ಇದುವರೆಗೆ ಯಾವುದೇ ಶಿಕ್ಷಕರಿಗಾಗಲಿ ಅಥವಾ ಖಾಸಗಿ ಸಂಸ್ಥೆಗಳಿಗಾಗಲಿ ಅನಾವಶ್ಯಕ ತೊಂದರೆಯಾಗದಂತೆ ನೋಡಿಕೊಂಡಿದ್ದೇನೆ.ಕೊರೊನಾ ಸಂಕಷ್ಟದ ಸಮಯದಲ್ಲಿ ಖಾಸಗಿ ಶಾಲಾ ಶಿಕ್ಷಕರಿಗಾಗಿ ಸರ್ಕಾರದಿಂದ ?೧೦೫ ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು.
ವಿಧಾನಸೌಧದಲ್ಲಿ ನಿರಂತರವಾಗಿ ಶಿಕ್ಷಕರ ಧ್ವನಿಯಾಗಿ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ ಎಂದ ಅವರು,ಮುಂಬರುವ ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು,ತಮ್ಮನ್ನು ಮತ್ತೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗುರುಕುಲ ವಿದ್ಯಾ ಸಂಸ್ಥೆಯ ಸುರೇಶ್ ಸರ್, ಎಂ.ವಿ. ಶಿಕ್ಷಣ ಸಂಸ್ಥೆಯ ಯಲಿಯೂರು ತ್ಯಾಗರಾಜ್, ಪ್ರಗತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಿ. ಬಸವರಾಜು, ಪ್ರಗತಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುರೇಶ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎನ್. ನಾಗರಾಜ್, ತಾಲೂಕು ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಪಿ.ಎಂ. ಕೊಟ್ರೇಶ್ ಸೇರಿದಂತೆ ವಿವಿಧ ಖಾಸಗಿ ಹಾಗೂ ಸರ್ಕಾರಿ ಶಾಲೆ-ಕಾಲೇಜುಗಳ ಶಿಕ್ಷಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು.































