Home ಮುಖಪುಟ ಸುದ್ದಿ ನಾಗೇಂದ್ರ ವಜಾಕ್ಕೆ ಆಗ್ರಹಿಸಿ ಬಿಜೆಪಿ ಪಾದಯಾತ್ರೆ

ನಾಗೇಂದ್ರ ವಜಾಕ್ಕೆ ಆಗ್ರಹಿಸಿ ಬಿಜೆಪಿ ಪಾದಯಾತ್ರೆ

ಬೆಂಗಳೂರು, ಆ. ೨೫- ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಬಿ. ನಾಗೇಂದ್ರ ರವರ ರಾಜೀನಾಮೆಗೆ ಪಟ್ಟು ಹಿಡಿದು ಸದನದಲ್ಲಿ ಹೋರಾಟ ನಡೆಸಿದ್ದ ಬಿಜೆಪಿ ಈಗ ಪಾದಯಾತ್ರೆ ನಡೆಸಲು ನಿರ್ಧರಿಸಿದೆ.


ಬರುವ ಸೆಪ್ಟೆಂಬರ್ ೧ ರಿಂದ ೧೦ರ ವರೆಗೂ ಬೃಹತ್ ಪಾದಯಾತ್ರೆ ನಡೆಯಲಿದೆ.


ಬಿಜೆಪಿ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಚಿವ ನಾಗೇಂದ್ರ ರವರ ವಜಾಕ್ಕೆ ಆಗ್ರಹಿಸಿ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆಯ ಬಗ್ಗೆ ಮಾಹಿತಿ ನೀಡಿ, ಸೆ. ೧ ರಿಂದ ೧೦ರ ವರೆಗೂ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಪಾದಯಾತ್ರೆ ರಾಯಚೂರಿನಿಂದ ಆರಂಭವಾಗಿ ಬಳ್ಳಾರಿಯಲ್ಲಿ ಸಮಾರೋಪವಾಗಲಿದೆ ಎಂದರು.


ಸುಮಾರು ೧೯೦ ರಿಂದ ೨೦೦ ಕಿ.ಮೀ. ವರೆಗೂ ಪಾದಯಾತ್ರೆ ಸಾಗಲಿದೆ ಎಂದು ಅವರು ಹೇಳಿದರು.


ಸೆ. ೧ ರಂದು ಲಿಂಗಸುಗೂರು ಕ್ಷೇತ್ರದ ಗುರಗುಂಟದಿಂದ ಪಾದಯಾತ್ರೆ ಆರಂಭವಾಗಲಿದ್ದು, ಅಲ್ಲಿಂದ ಲಿಂಗಸುಗೂರು, ಮಸ್ಕಿ, ಸಿಂಧನೂರು, ಶಿರಗುಪ್ಪ, ಸಿಂಧಗೇರಿ ಮೂಲಕ ಬಳ್ಳಾರಿ ತಲುಪಲಿದೆ ಎಂದು ಅವರು ತಿಳಿಸಿದರು.


ಈ ಪಾದಯಾತ್ರೆಯ ರೂಟ್ ಮ್ಯಾಪ್‌ನ್ನು ವಿಜಯೇಂದ್ರ ಅವರು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.


ಈ ಪಾದಯಾತ್ರೆಗೆ ಜೆಡಿಎಸ್ ಸಹ ಬೆಂಬಲ ನೀಡಿದೆ ಎಂದು ಅವರು ತಿಳಿಸಿದರು.
ಸೆ. ೧ ರಂದು ಪಾದಯಾತ್ರೆ ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಆಗಮಿಸಲಿದ್ದು, ಹೆಚ್.ಡಿ. ಕುಮಾರಸ್ವಾಮಿಯವರ ಜತೆಗೂ ಮಾತನಾಡಿದ್ದೇನೆ. ಅವರು ಪಾದಯಾತ್ರೆಗೆ ಸಹಕಾರ ಕೊಡಲಿದ್ದಾರೆ ಎಂದು ಹೇಳಿದರು.


ವಿಧಾನ ಮಂಡಲದ ಅಧಿವೇಶನಕ್ಕೂ ಮುನ್ನವೇ ನಾವು ಸುದ್ದಿಗೋಷ್ಠಿ ನಡೆಸಿ ನಾಗೇಂದ್ರ ವಜಾ ಮಾಡಲು ಒತ್ತಾಯಿಸಿದ್ದೆವು. ಆದರೆ ಸರ್ಕಾರ ಅವರ ರಾಜೀನಾಮೆ ಪಡೆಯಲಿಲ್ಲ. ಅಧಿವೇಶನದಲ್ಲೂ ಹೋರಾಟ ಮಾಡಿದರೂ ಸರ್ಕಾರ ಪಲಾಯನವಾದ ಮಾಡಿ ಅಧಿವೇಶನವನ್ನೇ ಮೊಟಕು ಮಾಡಿದರು ಎಂದು ಅವರು ವಾಗ್ದಾಳಿ ಮಾಡಿದರು.


ಪರಿಶಿಷ್ಟ ಪಂಗಡ ಸಮುದಾಯದ ವಿಚಾರದಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಸರಿಯಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಎಸ್ಟಿ ಮೀಸಲಾತಿಯನ್ನು ನಾವು ಹೆಚ್ಚಿಸಿದ್ದೆವು. ಅದನ್ನು ರಾಜ್ಯ ಸರ್ಕಾರ ಇಳಿಕೆ ಮಾಡಿದೆ. ಈ ಸರ್ಕಾರದ ಬಂಡವಾಳವನ್ನು ಬಯಲಿಗೆಳೆಯುತ್ತೇವೆ ಎಂದು ಅವರು ಹೇಳಿದರು.