Home ಮುಖಪುಟ ಸುದ್ದಿ ಕೆಪಿಎಸ್‌ಸಿ ಕಚೇರಿ ಮೇಲೆ ಸಿಐಡಿ ದಾಳಿ

ಕೆಪಿಎಸ್‌ಸಿ ಕಚೇರಿ ಮೇಲೆ ಸಿಐಡಿ ದಾಳಿ

ಬೆಂಗಳೂರು, ಆ.೨೫-ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಕಚೇರಿ ಮೇಲೆ ಸಿಐಡಿ ಪೊಲೀಸರು ಇಂದು ದಾಳಿ ನಡೆಸಿ ಶೋಧ ಕೈಗೊಂಡಿದ್ದಾರೆ.


ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳ ತಂಡ ಇಂದು ಎಸ್‌ಪಿ ರಾಘವೇಂದ್ರ ಹೆಗ್ಡೆ ನೇತೃತ್ವದಲ್ಲಿ ಎರಡನೇ ಬಾರಿ ಕೆಪಿಎಸ್‌ಸಿ ಕಚೇರಿ ಮೇಲೆ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದೆ.


ಮತ್ತೊಂದೆಡೆ ಪರೀಕ್ಷೆ ಎದುರಿಸಿದ್ದ ಎಲ್ಲ ೩೨೯ ಅಭ್ಯರ್ಥಿಗಳಿಗೆ ಇಂದು ವಿಚಾರಣೆಗೆ ಹಾಜರಾಗಲು ಸೂಚಿಸಿ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಅಭ್ಯರ್ಥಿಗಳಿಂದ ವಶಪಡಿಸಿಕೊಂಡಿರುವ ಓಎಂಆರ್ ಕಾರ್ಬನ್ ಶೀಟ್‌ಗಳನ್ನ ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಪ್ರಕರಣದ ಪ್ರತ್ಯೇಕ ತನಿಖೆ ನಡೆಸಿರುವ ಇಡಿ ಅಧಿಕಾರಿಗಳಿಗೆ ಲಭ್ಯವಾದ ಕೆಲ ಮಾಹಿತಿ ಹಾಗೂ ತಪ್ಪೊಪ್ಪಿಗೆ ಹೇಳಿಕೆಗಳನ್ನ ಆಧರಿಸಿ ಸಿಐಡಿ ಅಧಿಕಾರಿಗಳು ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿರುವುದಾಗಿ ತಿಳಿಸಿದ್ದಾರೆ.


ಬೃಹತ್ ಅಕ್ರಮ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ೨೧ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು.


ಅಲ್ಲದೆ ಪರೀಕ್ಷೆ ಉಸ್ತುವಾರಿ ವಹಿಸಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ನಿವಾಸದ ಮೇಲೆಯೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಅವರ ಅನುಪಸ್ಥಿತಿಯಲ್ಲಿ ಪರಿಶೀಲನೆ ನಡೆಸಿದ್ದ ಇಡಿ ಅಧಿಕಾರಿಗಳು ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ ತೆರಳಿದ್ದರು.