Home ಮುಖಪುಟ ಸುದ್ದಿ ಬಿಡಿಎ ಕಾರ್ಯಾಚರಣೆ: ೨೫ ಕೋಟಿ ರೂ. ಆಸ್ತಿ ವಶ

ಬಿಡಿಎ ಕಾರ್ಯಾಚರಣೆ: ೨೫ ಕೋಟಿ ರೂ. ಆಸ್ತಿ ವಶ

ಬೆಂಗಳೂರು. ಆ. ೨೫- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಇಂದು ನಡೆದ ಕಾರ್ಯಾಚರಣೆಯಲ್ಲಿ ಇಂಡಸ್ಟ್ರೀಯಲ್ ಸಬರ್ಬ್, ೨ನೇ ಹಂತ, ರಾಜಾಜಿನಗರ ಬಡಾವಣೆಯ ನಿವೇಶನ ಸಂಖ್ಯೆ: ೧೩ ಮತ್ತು ೧೭ ನಿವೇಶನಗಳ ತೆರವು ಕಾರ್ಯಾಚರಣೆ ಕೈಗೊಂಡು ಸುಮಾರು ರೂ. ೨೫.೦೦ ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ.

ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ ಪೀಣ್ಯ ಗ್ರಾಮದ ಸರ್ವೆ ನಂ. ೭೯ ಮತ್ತು ೭೦ ರಲ್ಲಿನ ಇಂಡಸ್ಟ್ರೀಯಲ್ ಸಬರ್ಬ್, ೨ನೇ ಹಂತ, ರಾಜಾಜಿನಗರ ಬಡಾವಣೆಯ ನಿವೇಶನ ಸಂಖ್ಯೆ: ೧೩ ಮತ್ತು ೧೭ ನಿವೇಶನಗಳ ಸುಮಾರು ೧೩೦೦೦ ಚದರ ಅಡಿಗಳ ಪ್ರದೇಶದಲ್ಲಿ ಅನಧಿಕೃವಾಗಿ ನಿರ್ಮಾಣವನ್ನು ತೆರವುಗೊಳಿಸಿ, ಸುಮಾರು ೨೫.೦೦ ಕೋಟಿ ಬೆಲೆ ಬಾಳುವ ಪ್ರದೇಶವನ್ನು ಪ್ರಾಧಿಕಾರವು ವಶಪಡಿಸಿಕೊಂಡಿತು.

ಈ ಕಾರ್ಯಾಚರಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಲಯ ಆಯುಕ್ತರು, ಆರಕ್ಷಕ ಅಧೀಕ್ಷಕರು, ಅಭಿಯಂತರ ಅಧಿಕಾರಿ-೧ ಹಾಗೂ ಪ್ರಾಧಿಕಾರದ ಕಾರ್ಯನಿರತ ಆರಕ್ಷಕ ಪಡೆ, ಪಶ್ಚಿಮ ವಿಭಾಗದ ಅಭಿಯಂತರರು, ಸರ್ವೆಯರ್ ಇವರುಗಳನ್ನು ಒಳಗೊಂಡಂತೆ ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ತೆರವುಕಾರ್ಯಾಚರಣೆಯನ್ನು ಕೈಗೊಂಡು ಸದರಿ ಪ್ರದೇಶವನ್ನು ಪ್ರಾಧಿಕಾರದ ಸುಪರ್ದಿಗೆ ಪಡೆಯಲಾಯಿತು.