
ಯಾದಗಿರಿ: ಮಳೆ ಕೊರತೆಯಿಂದ ಯಾದಗಿರಿ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರ ನೆರವಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆಗ್ರಹಿಸಿದ್ದಾರೆ.
ಯಾದಗಿರಿ ಹೊರವಲಯದ ಅಬ್ಬೆತುಮೂರು-ಮುದ್ನಾಳ್ ಪ್ರದೇಶದಲ್ಲಿರುವ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆಗಳ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಕಳೆದ ವರ್ಷ ಅತಿವೃಷ್ಟಿಯಿಂದ ಸಂಕಷ್ಟ ಅನುಭವಿಸಿದ್ದ ರೈತರು ಈ ಬಾರಿ ಮಳೆಯ ಅಭಾವದಿಂದ ಮತ್ತೊಂದು ದೊಡ್ಡ ಹೊಡೆತಕ್ಕೆ ಸಿಲುಕಿದ್ದಾರೆ. ಮಳೆಯನ್ನೇ ಅವಲಂಬಿಸಿ ಕೃಷಿ ಮಾಡುತ್ತಿರುವ ಬಹುತೇಕ ರೈತರಿಗೆ ಮುಂಗಾರು ಕೈಕೊಟ್ಟಿದ್ದು, ಈಗ ಹಿಂಗಾರು ಬೆಳೆಯ ಭವಿಷ್ಯವೂ ಅನಿಶ್ಚಿತವಾಗಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲೇ ರಾಜ್ಯದ ರೈತರ ಪರವಾಗಿ ಎಲ್ಲ ಶಾಸಕರು, ಸಚಿವರು ಹಾಗೂ ಮುಖ್ಯಮಂತ್ರಿ ಒಗ್ಗಟ್ಟಿನಿಂದ ನಿರ್ಣಯ ಕೈಗೊಂಡು ಯಾದಗಿರಿ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸುವಂತೆ ಸರ್ಕಾರವನ್ನು ಒತ್ತಾಯಿಸಬೇಕು ಎಂದರು.
ಮುAಗಾರು ಬೆಳೆ ನಷ್ಟಕ್ಕೆ ತಕ್ಷಣ ಪರಿಹಾರ:
ಮುಂಗಾರು ಹಂಗಾಮಿನಲ್ಲಿ ಬೆಳೆ ಬೆಳೆಸಿ ಮಳೆ ಕೊರತೆಯಿಂದ ನಷ್ಟ ಅನುಭವಿಸಿರುವ ಎಲ್ಲ ರೈತರಿಗೆ ಜಿಲ್ಲಾದ್ಯಂತ ತಕ್ಷಣ ಬೆಳೆ ಪರಿಹಾರ ನೀಡಬೇಕು. ಈಗಾಗಲೇ ಮುಂಗಾರು ಹಂಗಾಮಿಗೆ ವಿತರಿಸಲಾಗಿರುವ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಕೃಷಿ ಪರಿಕರಗಳನ್ನು ಹಿಂಗಾರು ಹಂಗಾಮಿಗೂ ಎಲ್ಲ ರೈತರಿಗೆ ಉಚಿತವಾಗಿ ವಿತರಿಸಬೇಕು ಎಂದು ಆಗ್ರಹಿಸಿದರು.
ಕುಡಿಯುವ ನೀರು, ಮೇವಿಗೆ ವಿಶೇಷ ಅನುದಾನ:
ಬರ ಪರಿಸ್ಥಿತಿ ಎದುರಿಸಲು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕಗೊಳಿಸುವುದರ ಜೊತೆಗೆ ಜಾನುವಾರುಗಳಿಗೆ ಮೇವು ಒದಗಿಸುವ ಕಾರ್ಯವನ್ನು ತುರ್ತಾಗಿ ಕೈಗೊಳ್ಳಬೇಕು. ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಕನಿಷ್ಠ ?೨೫ ಕೋಟಿ ವಿಶೇಷ ಬರ ನಿರ್ವಹಣಾ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
೧೦ ಗಂಟೆ ಗುಣಮಟ್ಟದ ವಿದ್ಯುತ್ ನೀಡಿ:
ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡಿರುವ ರೈತರಿಗೆ ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿದಿನ ಕನಿಷ್ಠ ೧೦ ಗಂಟೆಗಳ ಕಾಲ ಅಡೆತಡೆಯಿಲ್ಲದ ಹಾಗೂ ಗುಣಮಟ್ಟದ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ವಿದ್ಯುತ್ ಪರಿವರ್ತಕಗಳು ಸುಟ್ಟುಹೋದ ಸಂದರ್ಭದಲ್ಲಿ ರೈತರು ದಿನಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗದಂತೆ ತಕ್ಷಣವೇ ಪರಿವರ್ತಕ ಬದಲಿಸುವ ವ್ಯವಸ್ಥೆ ರೂಪಿಸಬೇಕು ಎಂದು ಹೇಳಿದರು.
ರೈತರ ಸಾಲ ಸಂಪೂರ್ಣ ಮನ್ನಾ ಮಾಡಲಿ:
ಮಳೆ ಕೊರತೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರ ಹೊರೆ ಕಡಿಮೆ ಮಾಡಲು ಭೂ ಕಂದಾಯವನ್ನು ಸಂಪೂರ್ಣ ಮನ್ನಾ ಮಾಡಬೇಕು. ವಾಣಿಜ್ಯ ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಉಮೇಶ ಕೆ. ಮುದ್ನಾಳ್ ಆಗ್ರಹಿಸಿದರು.
ಈಗಾಗಲೇ ಸಾಲವನ್ನು ಸ್ವಂತ ಹಣ ಅಥವಾ ಇತರ ಮೂಲಗಳಿಂದ ತೀರಿಸಿರುವ ರೈತರನ್ನೂ ಸಾಲಮನ್ನಾ ಯೋಜನೆಯ ವ್ಯಾಪ್ತಿಗೆ ಪರಿಗಣಿಸಬೇಕು. ಸಾಲಮನ್ನಾದಲ್ಲಿ ದೊಡ್ಡ ರೈತ-ಸಣ್ಣ ರೈತ ಎಂಬ ಯಾವುದೇ ತಾರತಮ್ಯ ಮಾಡಬಾರದು. ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ ಎಂಬ ಕಾರಣಕ್ಕೆ ರೈತರನ್ನು ಯೋಜನೆಯಿಂದ ಹೊರಗಿಡದೆ, ರೈತ ಎಂಬ ಅರ್ಹತೆಯನ್ನೇ ಸಾಲಮನ್ನಾಕ್ಕೆ ಪ್ರಮುಖ ಮಾನದಂಡವನ್ನಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.
ರೈತರ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ವಿಳಂಬ ಮಾಡದೆ ಬರ ಪರಿಹಾರ ಹಾಗೂ ಸಾಲಮನ್ನಾ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅನ್ನದಾತರ ನೆರವಿಗೆ ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಗ್ರಾಮೀಣ ಆರ್ಥಿಕತೆಯ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಉಮೇಶ ಕೆ. ಮುದ್ನಾಳ್ ಎಚ್ಚರಿಸಿದರು.































