
ಮಾಲೂರು.ಆ೨೦-ಇಂದಿನ ವಿದ್ಯಾರ್ಥಿಗಳು ಮತ್ತು ಯುವ ಜನತೆ ಮೊಬೈಲ್ ಗೀಳಿನಿಂದ ಹೊರಬಂದು ಅದೇ ಸಮಯವನ್ನು ಓದುವ ಅಭ್ಯಾಸಕ್ಕಾಗಿ ಮೀಸಲಿಟ್ಟರೆ ಖಂಡಿತ ಬದುಕಿನಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ನಾಗರೀಕ ಜಾರಿ ನಿರ್ದೇಶನಾಲಯದ ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಆರ್.ವಸಂತಕುಮಾರ್ ಅಭಿಪ್ರಾಯಪಟ್ಟರು. ಟೇಕಲ್ನಲ್ಲಿ ದಲಿತ ಸಂಘರ್ಷ ಸಮಿತಿ ಮಾಲೂರು ತಾಲ್ಲೂಕು ಶಾಖೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಡಾ. ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ಉನ್ನತ ಶಿಕ್ಷಣ ಪಡೆದು, ಸಾವಿರಾರು ಪುಸ್ತಕಗಳನ್ನು ಓದುವ ಮೂಲಕ ತಮಗೆ ದೊರೆತ ಸಂವಿಧಾನ ರಚಿಸುವ ಅವಕಾಶವನ್ನು ಬಳಸಿ ಈ ದೇಶದ ಬಹುಸಂಖ್ಯಾತ ಶೋಷಿತರ ಬದುಕಿಗೆ ಬೆಳಕಾಗಿದ್ದಾರೆ. ಅದೇ ರೀತಿ ವಿದ್ಯಾರ್ಥಿಗಳು ಓದುವ ಅಭ್ಯಾಸವನ್ನು ಮೈಗೂಡಿಸಿಕೊಂಡು ಆ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕರೆನೀಡಿದರು.
ವಿಶೇಷ ಉಪನ್ಯಾಸ ನೀಡಿದ ಡಾ.ಸುರೇಶ ಗೌತಮ್,ಈ ದೇಶದ ಶೋಷಿತರ ನೊಂದ ಧ್ವನಿಗೆ ಕಿವಿಯಾಗಿ ಆ ಮೂಲಕ ಪ್ರತಿಯೊಬ್ಬರಿಗೂ ನ್ಯಾಯ ದೊರಕಿಸಿಕೊಟ್ಟಿದ್ದು ಈ ದೇಶದ ಡಾ. ಅಂಬೇಡ್ಕರ್ ಬರೆದ ಸಂವಿಧಾನ. ಜೀವಂತ ಶವಗಳಂತಿದ್ದ ಬಹುಸಂಖ್ಯಾತರಿಗೆ ಧೈರ್ಯವಾಗಿ ಮಾತನಾಡುವ ಸ್ವಾತಂತ್ರ್ಯ ನೀಡಿ, ಸ್ವಾಭಿಮಾನದ ಬದುಕುವ ಹಕ್ಕನ್ನು ಕಾನೂನುಬದ್ದಗೊಳಿಸಿದ ಸಂವಿಧಾನವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು. ಡಾ.ಸುರೇಶ್ ಕುಮಾರ್ ಮಕ್ಕಳಿಗೆ ವಿದ್ಯಾಭ್ಯಾಸದ ಅಗತ್ಯ ಎಷ್ಟಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.
ದಸಂಸ ತಾಲ್ಲೂಕು ಸಂಚಾಲಕ ಎಂ.ಶೇಷಪ್ಪ ಮಾತನಾಡಿದ ಕಾರ್ಯಕ್ರಮದಲ್ಲಿ ಟೇಕಲ್ ಹೋಬಳಿಯ ಸರ್ಕಾರಿ ಶಾಲೆಗಳಲ್ಲಿ ಏಳನೇ ತರಗತಿ, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಪ.ಜಾತಿ/ಪಂಗಡದ ಸುಮಾರು ಐವತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಎ.ಕೆ.ವೆಂಕಟೇಶ್, ಇನ್ಸ್ಪೆಕ್ಟರ್ ನಾರಾಯಣಸ್ವಾಮಿ ಟೇಕಲ್ ರಾಮಣ್ಣ,ಚಿಲಪಗಾನಹಳ್ಳಿ ಮಂಜು,ಚಿಕ್ಕಾಪುರ ಶ್ರೀನಿವಾಸ್, ಮಡಿವಾಳ ಅಶ್ವತ್, ಡಿ.ಎಂ. ನಾರಾಯಣಪ್ಪ, ಮಹಿಳಾ ಸಂಚಾಲಕಿ ಸರಿತಾ ಮೂಗಪ್ಪ, ಮೋಹನ ಸುಂದರಂ, ಈಶ್ವರ್, ವೀಣಾ ಮುನಿಯಪ್ಪ, ರವಿ, ಮನೋಹರ್ ಮುನಿಕೃಷ್ಣಪ್ಪ, ಹುಲ್ಕೂರು ರಾಜಪ್ಪ, ಮುನಿರಾಜು, ನಾಗರಾಜು, ರಾಜಣ್ಣ, ನಾರಾಯಣಸ್ವಾಮಿ, ವೆಂಕಟೇಶಪ್ಪ, ಶಶಿಧರ, ಮುನಿವೆಂಕಟಪ್ಪ, ಬಸವರಾಜು, ಇನ್ನಿತರರು ಹಾಜರಿದ್ದರು.































