
ಕಲಬುರಗಿ,ಆ.19-ನಗರದ ನಂದಿ ಕಾಲೋನಿಯ ನಂದೀಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಜರುಗುತ್ತಿರುವ ಮಹಾದಾಸೋಹಿ ಕಲಬುರಗಿ ಶರಣಬಸವೇಶ್ವರ ಪುರಾಣದಲ್ಲಿ ಶರಣಬಸವೇಶ್ವರ ತೊಟ್ಟಿಲೋತ್ಸವ ಬಲು ವಿಜೃಂಭಣೆಯಿಂದ ಜರುಗಿತು.
ನಗರದ ಅನೇಕ ಜನ ತಾಯಿ ಬಳಗ ಆಗಮಿಸಿ ಜೋಗುಳ ಪದಗಳನ್ನ ಹಾಡಿ ಪುರಾಣಕ್ಕೆ ಮೆರಗನ್ನ ತಂದು ಕೊಟ್ಟರು.
ಪುರಾಣ ಪ್ರವಚನಕಾರರಾದ ಸುಂಟನೂರ ಸಂಸ್ಥಾನ ಹಿರೇಮಠದ ಬಂಡಯ್ಯ ಶಾಸ್ತ್ರೀಜಿ ಇದೇ ಸಂದರ್ಭದಲ್ಲಿ ಮಾತನಾಡಿ, ಮಕ್ಕಳಿಗೆ ಒಳ್ಳೆಯ ಹೆಸರುಗಳನ್ನು ಇಡಬೇಕು. ಆ ಹೆಸರಿನಲ್ಲಿ ಒಂದು ಅರ್ಥ ಇರಬೇಕು. ಹಿಂದೆ ನಮ್ಮ ಹಿರಿಯರು, ಶರಣರ, ಸಂತರ, ದಾರ್ಶನಿಕರ ಹೆಸರುಗಳು ಇಡುತ್ತಿದ್ದರು ಎಂದರು. ಕಲಾವಿದರಾದ ಆನಂದ ಕುಮಾರ ನಂದಿಕೋಲ, ಶ್ರೀ ಜಗದೀಶ ಹೂಗಾರ ಪುರಾಣಕ್ಕೆ ಸಂಗೀತ ಸಾತ್ ನೀಡಿದರು.
ನಂದೀಶ್ವರ ಪುರಾಣ ಮಂಡಳಿ ಹಾಗೂ ತರುಣ ಸಂಘ, ನಂದಿ ಕಾಲೋನಿ ಭಕ್ತ ಬಳಗ ಆಗಮಿಸಿ ಶರಣಬಸವೇಶ್ವರ ಮಹಾರಾಜಕಿ ಜೈ ಅನ್ನು ಜಯ ಘೋಷವ ಮಾಡಿ ಪ್ರಸಾದವನ್ನು ಸವಿದರು.





























