Home ಜಿಲ್ಲೆ ಕಲಬುರಗಿ ಕಾವಿ ತೊಟ್ಟು ಮದ್ಯದ ಅಮಲಿನಲ್ಲಿ “ಯಾರಿವಳು” ಹಾಡು ಗುನುಗಿದ ಮರುಳಾರಾಧ್ಯ ಸ್ವಾಮೀಜಿ !

ಕಾವಿ ತೊಟ್ಟು ಮದ್ಯದ ಅಮಲಿನಲ್ಲಿ “ಯಾರಿವಳು” ಹಾಡು ಗುನುಗಿದ ಮರುಳಾರಾಧ್ಯ ಸ್ವಾಮೀಜಿ !

ಅಫಜಲಪುರ: ಶ್ರಾವಣ ಮಾಸದ ಪ್ರಾರಂಭದಲ್ಲಿಯೇ ಧಾರ್ಮಿಕ ವಲಯ ತಲೆತಗ್ಗಿಸುವಂತಹ ಕೆಲಸವೊಂದು ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಶ್ರೀ ಮರುಳಾರಾಧ್ಯ ಸ್ವಾಮೀಜಿ ಮಾಡಿರುವ ಘನಂದಾರಿ ಕೆಲಸದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ತಾಲೂಕಿನ ಮಾಶಾಳ ಗ್ರಾಮದ ಶ್ರೀ ಮರುಳಾರಾಧ್ಯ ಸ್ವಾಮೀಜಿ ಶ್ರಾವಣ ಮಾಸದ ಪವಿತ್ರ ದಿನಗಳಲ್ಲೇ ಮಠದ ಒಳಗೆ ಮದ್ಯದ ಬಾಟಲಿ ಮುಂದಿಟ್ಟುಕೊಂಡು ಸಿನಿಮಾ ಹಾಡು ಹಾಡಿ ಧೂಳೆಬ್ಬಿಸಿರುವ ಮೋಜಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಸ್ವಾಮೀಜಿಯ ಈ ಬಿಂದಾಸ್ ಲೈಫ್‍ಸ್ಟೈಲ್ ವಿಡಿಯೋ ಹೊರಬಂದಿರುವುದು ಭಕ್ತ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆಯೂ ಶ್ರೀ ಮರುಳಾರಾಧ್ಯ ಸ್ವಾಮೀಜಿ ಅವರು ಕೆಲವು ದಿನಗಳ “ಹಿಂದೂ ಧರ್ಮದ ರಕ್ಷಣೆಗಾಗಿ ಮಕ್ಕಳ ಕೈಯಲ್ಲಿ ಪೆನ್ನಿನ ಬದಲಿಗೆ ಖಡ್ಗ ಕೊಡಿ” ಎಂದು ಭಾಷಣ ಮಾಡಿ ಭಾರಿ ವಿವಾದ ಸೃಷ್ಟಿಸಿದ್ದರು. ಸಮಾಜಕ್ಕೆ ಧರ್ಮ ಮತ್ತು ಸಂಸ್ಕಾರದ ಪಾಠ ಮಾಡಬೇಕಾದ ಹಾಗೂ ಮಕ್ಕಳ ಕೈಗೆ ಮಾರಕಾಸ್ತ್ರ ನೀಡಲು ಪ್ರಚೋದಿಸಿದರು. ಅಲ್ಲದೇ ಅನ್ಯ ಸಮುದಾಯದ ಬಗ್ಗೆ ಕೀಳಾಗಿ ಮಾತನಾಡಿದ್ದು ಸೇರಿದಂತೆ ಈ ಸ್ವಾಮೀಜಿ ವಿರುದ್ಧ ಈಗಾಗಲೇ ಎರಡ್ಮೂರು ಪ್ರಕರಣಗಳು ಪೆÇೀಲಿಸ್ ಠಾಣೆಯಲ್ಲಿ ದಾಖಲಾಗಿವೆ.ಈಗ ಸ್ವಾಮೀಜಿಯ ಅಸಲಿ ಮುಖವಾಡ ಈಗ ಅವರದ್ದೇ ಮಠದಲ್ಲಿ ಬಯಲಾಗಿದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.


ವಿಡಿಯೋದಲ್ಲೇನಿದೆ ?
ವೈರಲ್ ಆಗಿರುವ ವಿಡಿಯೋದಲ್ಲಿ ಮರುಳಾರಾಧ್ಯ ಸ್ವಾಮೀಜಿ ಅವರು ಕೈಯಲ್ಲಿ ಮೈಕ್ ಹಿಡಿದು, ಪಕ್ಕದಲ್ಲೇ ಮದ್ಯದ ಬಾಟಲಿಯನ್ನು ಇಟ್ಟುಕೊಂಡು ಅತ್ಯಂತ ಗತ್ತಿನಿಂದ ‘ರಾಮಾಚಾರಿ’ ಚಿತ್ರದ ಪ್ರಸಿದ್ಧ “ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು…”ಪ್ರೇಮಗೀತೆಯನ್ನು ಹಾಡುತ್ತಾ ಮೋಜು ಮಸ್ತಿಯಲ್ಲಿ ಮುಳುಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಮಠದ ಪಾವಿತ್ರ್ಯತೆಯನ್ನು ಕಾಪಾಡಬೇಕಾದ ಪೀಠಾಧಿಪತಿಯೇ ಈ ರೀತಿ ವರ್ತಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.


ಪೂಜ್ಯ ಭಾವನೆಯಿಂದ ನೋಡುವ ಮಠದಲ್ಲೇ ಸ್ವಾಮೀಜಿ ಆದವರು ಈ ರೀತಿ ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಮಾಡಬೇಕಾದರೆ ಮಠ ಬಿಟ್ಟು ಮೊದಲು ಮನೆ ಸೇರಲಿ, ಇಂತಹ ಸ್ವಾಮೀಜಿಗಳಿಂದ ಮಠ ಮಂದಿರಗಳ ಮೇಲೆ ಭಕ್ತಿ ಭಾವದಿಂದ ಕಾಣುವ ನಮ್ಮಂತಹ ಲಕ್ಷಾಂತರ ಭಕ್ತರ ಭಾವನೆಗೆ ಧಕ್ಕೆ ಬರುತ್ತಿದೆ. ಈ ಕೂಡಲೇ ಈ ಸ್ವಾಮೀಜಿಯನ್ನು ಮಠದಿಂದ ತೆಗೆದು ಹಾಕಬೇಕು.

-ಶೀವು ಪ್ಯಾಟಿ
ಗ್ರಾಮಸ್ಥ, ಮಾಶಾಳ