
ಕಲಬುರಗಿ,ಆ 18: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ( ಕೆಪಿಎಸ್‍ಸಿ) ಅಕ್ರಮ ಆರೋಪಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು ( ಇ.ಡಿ) ಇಂದು ರಾಜ್ಯದ 21 ಕಡೆಗಳಲ್ಲಿ ಶೋಧ ನಡೆಸಿದೆ.ಬೆಂಗಳೂರಿನ 13 ಕಡೆ ರಾಜ್ಯದ 8 ಕಡೆ ಏಕಕಾಲಕ್ಕೆ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಪಿಎಸ್‍ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಕಲಬುರಗಿಯಲ್ಲಿರುವ ಆನಂದ ಹೊಟೇಲ್ ಹತ್ತಿರದ ಮನೆ ,ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸ ಸೇರಿದಂತೆ ಅವರ ಸ್ನೇಹಿತರ ಮನೆಗಳ ಮೇಲೆ ಏಕಕಾಲದಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಲಬುರಗಿಯಲ್ಲಿ ಸಿಆರ್‍ಪಿಎಫ್ ಯೋಧರ ಭದ್ರತೆಯೊಂದಿಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು 10 ಕ್ಕೂ ಹೆಚ್ಚು ಅಧಿಕಾರಿಗಳು ತಂಡದಲ್ಲಿದದಾರೆ
ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಶಿವಶಂಕರಪ್ಪ ಸಾಹುಕಾರ್ ವಿರುದ್ಧ ಇಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿರುವ ಇಡಿ ಅಧಿಕಾರಿಗಳು ಶಿವಶಂಕರಪ್ಪ ಸಾಹುಕಾರ್ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಶಿವಶಂಕರಪ್ಪ ಸಾಹುಕಾರ್ ಅವರು ಕೆಪಿಎಸ್‍ಸಿ ಅಧ್ಯಕ್ಷರಾಗಿದ್ದಾಗ ತಮ್ಮ ಅಧಿಕಾರ ಬಳಸಿ ಪುತ್ರಿಗೆ ಸುಳ್ಳು ಆದಾಯ ಪ್ರಮಾಣಪತ್ರ ನೀಡಿ ಉದ್ಯೋಗ ಕೊಡಿಸಲು ಯತ್ನಿಸಿದ್ದಾರೆಂಬ ಆರೋಪದ ಮೇಲೆ ರಾಜ್ಯಪಾಲರಿಂದ ಅಮಾನತುಗೊಂಡಿದ್ದರು.
ಸುಮಾರು 400 ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಒಎಂಆರ್ ಶೀಟ್ ತಿರುಚಿದ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ































