Home ಜಿಲ್ಲೆ ಕಲಬುರಗಿ ವಂದೇ ಮಾತರಂಗೆ ಕಾಂಗ್ರೆಸ್ ಪಕ್ಷದಿಂದ ಅಗೌರವ ಕ್ಷಮೆಯಾಚನೆಗೆ ಸುಂದರ ಡಿ ಸಾಗರ್ ಆಗ್ರಹ

ವಂದೇ ಮಾತರಂಗೆ ಕಾಂಗ್ರೆಸ್ ಪಕ್ಷದಿಂದ ಅಗೌರವ ಕ್ಷಮೆಯಾಚನೆಗೆ ಸುಂದರ ಡಿ ಸಾಗರ್ ಆಗ್ರಹ

ಕಲಬುರಗಿ: ಸ್ವಾತಂತ್ರ್ಯ ದಿನಾಚರಣೆಯಂದು ವಂದೇ ಮಾತರಂ ಗೀತೆಗೆ ಅಗೌರವ ತೋರಿದ ಆರೋಪ ಎದುರಿಸುತ್ತಿರುವ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ದೇಶದ ಜನತೆಗೆ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಜಿಲ್ಲಾ ಗ್ರಾಮಾಂತರ ಕಾರ್ಯದರ್ಶಿ ಸುಂದರ ಡಿ ಸಾಗರ ಅವರು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ಸ್ವಾತಂತ್ರ್ಯ ದಿನಾಚರಣೆಯಂದು ಕಾಂಗ್ರೆಸ್ ಕಚೇರಿಯಲ್ಲಿ ವಂದೇ ಮಾತರಂ ಗೀತೆಯ ಪೂರ್ಣ ಗಾಯನಕ್ಕೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ತಡೆಯೊಡ್ಡಿರುವುದು ರಾಷ್ಟ್ರಗೀತೆಯ ಸ್ಥಾನಮಾನ ನೀಡಲಾದ ವಂದೇ ಮಾತರಂ ಗೀತೆಗೆ ಮಾಡಿದ ಅವಮಾನವಾಗಿದೆ. ಕಾಂಗ್ರೆಸ್ ಪಕ್ಷವು ಕೂಡಲೇ ದೇಶದ ಜನತೆಯಲ್ಲಿ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ದಿಲ್ಲಿಯ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ ಗೀತೆ’ಯ ಪೂರ್ಣ ಆವೃತ್ತಿಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದು ಖಂಡನೀಯ ಎಂದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಧ್ವಜಾರೋಹಣ ನೆರವೇರಿಸಿದ ಬಳಿಕ ‘ವಂದೇ ಮಾತರಂ ಗೀತೆ’ ಆರಂಭವಾಗಿದ್ದು,ಗೀತೆಯ ಪೂರ್ಣ ಆವೃತ್ತಿ ಮುಂದುವರಿಸುವುದಕ್ಕೆ ಸೋನಿಯಾ ಗಾಂಧಿ ವಿರೋಧ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಅವರೂ ಗೀತೆಯನ್ನು ನಿಲ್ಲಿಸುವಂತೆ ಸೂಚಿಸಿದಂತೆ ಕಂಡುಬಂದಿದೆ. ವಂದೇ ಮಾತರಂ ಗೀತೆಯ ಬಗ್ಗೆ ಕಾಂಗ್ರೆಸ್ ನಾಯಕರ ನಿಲುವು ಖಂಡನೀಯವಾಗಿದೆ ಎಂದು ಅವರು ಹೇಳಿದರು.