Home ಜಿಲ್ಲೆ ಕಲಬುರಗಿ ವೈಚಾರಿಕತೆಯ ಆಚರಣೆಗಳು ಇಂದಿನ ಅಗತ್ಯ

ವೈಚಾರಿಕತೆಯ ಆಚರಣೆಗಳು ಇಂದಿನ ಅಗತ್ಯ

ಕಲಬುರಗಿ: ನಾಗರ ಪಂಚಮಿಯಂದು ಅಮೃತಕ್ಕೆ ಸಮನಾದ ಹಾಲು ಮತ್ತು ಆಹಾರವನ್ನು ಕಲ್ಲು, ಮಣ್ಣು ಪಾಲು ಮಾಡುವ ಮೌಢ್ಯತೆಯ ಸಂಪ್ರದಾಯವನ್ನು ಬಿಟ್ಟು, ಬಡ,ಅನಾಥ, ರೋಗಿಗಳು, ಅಸಹಾಯಕರು, ಮಕ್ಕಳಿಗೆ ಇವುಗಳನ್ನು ನೀಡುವ ಮೂಲಕ ಅವರಲ್ಲಿ ದೇವರನ್ನು ಕಾಣುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕಾದದ್ದು ಇಂದಿನ ಅವಶ್ಯಕತೆಯಾಗಿದೆ. ಪ್ರತಿಯೊಬ್ಬರಲ್ಲಿ ವೈಚಾರಿಕ ಪ್ರಜ್ಞೆ, ಆಚರಣೆಗಳು ಬೆಳೆಸಿಕೊಳ್ಳಬೇಕಾಗಿದೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ್ ಹೇಳಿದರು.
ನಗರದ ಪ್ರಭುದೇವ ನಗರದಲ್ಲಿನ ‘ಶ್ರೀ ನೀಲಂಠೇಶ್ವರ ಶಾಲೆ’ಯ ಆವರಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಏರ್ಪಡಿಸಿದ್ದ ‘ಬಸವ ಪಂಚಮಿ’ಯ ನಿಮಿತ್ಯ ಬಡಾವಣೆಯ ಮಕ್ಕಳಿಗೆ ಹಾಲು ಕುಡಿಸುವ ಕಾರ್ಯಕ್ರಮ ಮತ್ತು ಶರಣೆ ಅಕ್ಕನಾಗಮ್ಮನವರ ಜಯಂತಿಯಲ್ಲಿ ಅವರು ಮಾತನಾಡಿದರು.
ಶರಣ ಚಿಂತಕರಾದ ಷಣ್ಮುಖ್ಯಯ್ಯ ಹಿರೇಮಠ, ಡಾ.ರಾಜಶೇಖರ ಪಾಟೀಲ್, ಶಿವಲಿಂಗಪ್ಪ ಸಂಗೋಳಗಿ ಮಾತನಾಡುತ್ತಾ, ಪ್ರತಿವರ್ಷ ನಾಗರ ಪಂಚಮಿ ನೆಪದಲ್ಲಿ ಲಕ್ಷಾಂತರ ಲೀಟರ ಹಾಲನ್ನು ಹುತ್ತಕ್ಕೆ ಮತ್ತು ನಾಗ ಪ್ರತಿಮೆಗಳಿಗೆ ಸುರಿದು ಅನಾವಶ್ಯಕವಾಗಿ ಹಾಳು ಮಾಡಲಾಗುತ್ತಿದೆ. ವೈಜ್ಞಾನಿಕ ಯುಗದಲ್ಲಿ ಇಂತಹ ಮೂಢನಂಬಿಕೆ ಆಚರಿಸಬಾರದು. ಶರಣೆ ಅಕ್ಕನಾಗಮ್ಮನವರ ಕೊಡುಗೆ ಅನನ್ಯವಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಶಿವಯೋಗೆಪ್ಪಾ ಎಸ್.ಬಿರಾದಾರ, ದಿನೇಶ್ ಮಿಶ್ರಾ, ಪಂಡಿತರಾವ ಪಾಟೀಲ್, ಗುಂಡೇರಾವ್ ಪಾಟೀಲ್, ಸಂಗಣ್ಣ ಪಾಟೀಲ್, ಮಂಜುನಾಥ ಅಂಬಾಜಿ, ಸಂಗಮೇಶ ಕಡಗಂಚಿ, ಮಲ್ಲಿಕಾರ್ಜುನ ಮೇತ್ರೆ, ಮಹೇಶ ನಾಗೂರೆ, ಶಂಕರ ಮೂಲಗೆ, ಗುಂಡುರಾವ್ ಶೀಲವಂತ, ರಾಚಣ್ಣ, ಈರಣ್ಣ ಸೇರಿದಂತೆ ಬಡಾವಣೆಯ ಅನೇಕರು ಭಾಗವಹಿಸಿದ್ದರು.