
ತಿರುವನಂತಪುರ,ಆ.8:- ಹಿರಿಯ ನಟ ಮೋಹನ್ ಲಾಲ್ ಅವರ ಪುತ್ರಿ ವಿಸ್ಮಯ, ಜೂಡ್ ಅಂಥಾನಿ ನಿರ್ದೇಶನದ ಮತ್ತು ಆಂಥೋನಿ ಪೆರುಂಬವೂರ್ ನಿರ್ಮಾಣದ ‘ತುಡಕ್ಕಂ’ ಚಿತ್ರದ ಮೂಲಕ ನಟಿಸಲಿದ್ದಾರೆ. ಮಲಯಾಳಂ ಚಿತ್ರರಂಗದ ಕಂಪ್ಲೀಟ್ ಆಕ್ಟರ್ ಎಂದು ಕರೆಸಿಕೊಳ್ಳೋ ಮೋಹನ್ಲಾಲ್ ಮಗಳು ತಮ್ಮ ನಟನಾ ಪ್ರಯಾಣವನ್ನು ಪ್ರಾರಂಭಿಸುತ್ತಿರುವ ಈ ಮಹತ್ವದ ಕ್ಷಣವನ್ನು ಮಲಯಾಳಂ ಚಿತ್ರರಂಗದಲ್ಲಿ ಹೆಚ್ಚು ನಿರೀಕ್ಷೆಯಿಂದ ಎದುರು ನೋಡಲಾಗ್ತಿದೆ.
ಮಲಯಾಳಂ ಮೋಹನ್ ಲಾಲ್ ಅವರ ಪುತ್ರಿ ವಿಸ್ಮಯ, ಜೂಡ್ ಅಂಥಾನಿ ನಿರ್ದೇಶನದ ಮತ್ತು ಆಂಥೋನಿ ಪೆರುಂಬವೂರ್ ನಿರ್ಮಾಣದ ‘ತುಡಕ್ಕಂ’ ಚಿತ್ರದ ಮೂಲಕ ಅದ್ಧೂರಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ತಮ್ಮ ಚೊಚ್ಚಲ ಸಿನಿಮಾದ ಮೊದಲ ದಿನವೇ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಹಾಗೂ ಚಪ್ಪಾಳೆ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿನ್ನೆ ನಡೆದ ಚಿತ್ರದ ಮೊದಲ ಪ್ರದರ್ಶನವನ್ನು ವೀಕ್ಷಿಸಲು ವಿಸ್ಮಯ ಅವರು ಸ್ವತಃ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಈ ವೇಳೆ ಅವರ ಸಹೋದರ, ನಟ ಪ್ರಣವ್ ಮೋಹನ್ ಲಾಲ್ ಅವರು ಸಹೋದರಿಯ ಕೈ ಹಿಡಿದುಕೊಂಡು ಚಿತ್ರಮಂದಿರಕ್ಕೆ ಕರೆತಂದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಪ್ರಣವ್ ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ವಿಸ್ಮಯ ಅವರ ಸಿನಿ ಪಯಣ ಆರಂಭವಾಗಿದೆ.
ತಮ್ಮ ಮಗಳ ಈ ಚೊಚ್ಚಲ ಅಭಿನಯಕ್ಕೆ ಪ್ರೇಕ್ಷಕರು ನೀಡುತ್ತಿರುವ ಭರ್ಜರಿ ಬೆಂಬಲ ಹಾಗೂ ಪ್ರೀತಿಯನ್ನು ಕಂಡು ಭಾವುಕರಾಗಿರುವ ಮೋಹನ್ ಲಾಲ್, ಸಾಮಾಜಿಕ ಮಾಧ್ಯಮದಲ್ಲಿ ಪೆÇೀಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದ್ದಾರೆ. ವಿಸ್ಮಯ ಅವರ ಹೊಸ ಸಿನಿಮಾದ ಪೆÇೀಸ್ಟರ್ ಶೇರ್ ಮಾಡಿರುವ ಅವರು, “ಒಬ್ಬ ತಂದೆಯ ಹೃದಯ ಇದಕ್ಕಿಂತ ಹೆಚ್ಚಿನದನ್ನು ಕೇಳಲು ಸಾಧ್ಯವಿಲ್ಲ. ವಿಸ್ಮಯ ತನ್ನ ಸಿನಿ ಪಯಣವನ್ನು ಮೊದಲಿನಿಂದ ಆರಂಭಿಸುತ್ತಿರುವುದನ್ನು ಮತ್ತು ಪ್ರೇಕ್ಷಕರು ಅವಳಿಗೆ ತೋರಿಸುತ್ತಿರುವ ಪ್ರೀತಿಯನ್ನು ನೋಡುವುದು ನನಗೆ ಸದಾ ನೆನಪಿನಲ್ಲಿ ಉಳಿಯುವ ಆಶೀರ್ವಾದವಾಗಿದೆ. ಅದರಲ್ಲೂ ನಾನು ಚಿಕ್ಕ ಹುಡುಗನಾಗಿದ್ದಾಗಿನಿಂದ ಬಲ್ಲ ಆಶಿಶ್ ಜೋ ಆಂಟನಿ ಈ ಪ್ರಯಾಣದಲ್ಲಿ ಅವಳೊಂದಿಗೆ ಇರುವುದು ನನ್ನ ಹೃದಯಕ್ಕೆ ಇನ್ನಷ್ಟು ಮುದ ನೀಡಿದೆ. ಅವರಿಬ್ಬರನ್ನೂ ಪ್ರೀತಿಯಿಂದ ಅಪ್ಪಿಕೊಂಡ ಪ್ರತಿಯೊಬ್ಬರಿಗೂ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.
ಈ ಚಿತ್ರದಲ್ಲಿ ನಿರ್ಮಾಪಕ ಆಂಥೋನಿ ಪೆರುಂಬವೂರ್ ಅವರ ಮಗ ಆಶಿಶ್ ಜೋ ಆಂಟೋನಿ ಖಳನಾಯಕನಾಗಿ ನಟಿಸಿದ್ದು, ಅವರ ಅಭಿನಯಕ್ಕೂ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಪ್ರಖ್ಯಾತ ನಿರ್ದೇಶಕ ಜೂಡ್ ಆಂಥೋನಿ ನಿರ್ದೇಶನದ ಈ ಚಿತ್ರದಲ್ಲಿ ಸಾಯಿ ಕುಮಾರ್, ಮನೋಜ್ ಕೆ ಜಯನ್ ಹಾಗೂ ಜಾಫರ್ ಇಡುಕ್ಕಿ ಸೇರಿದಂತೆ ಪ್ರಮುಖ ಕಲಾವಿದರು ನಟಿಸಿದ್ದಾರೆ.
ತಂದೆ ಹಾಗೂ ಸಹೋದರನ ಹಾದಿಯಲ್ಲೇ ಸಾಗಿಬಂದಿರುವ ವಿಸ್ಮಯ, ವಿಶೇಷವಾಗಿ ಸಾಹಸ ದೃಶ್ಯಗಳಲ್ಲಿ ಅತ್ಯದ್ಭುತ ಅಭಿನಯ ನೀಡುವ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಸದ್ಯ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ಈ ಚಿತ್ರದ ಯಶಸ್ಸು ಮತ್ತು ವಿಸ್ಮಯ ಅವರ ಎಂಟ್ರಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ.































