Home ಜಿಲ್ಲೆ ತುಮಕೂರು ಅಸಹಾಯಕ ಮಹಿಳೆ ದತ್ತು ಪಡೆದ ಇಕ್ಬಾಲ್ ಅಹಮದ್; ಡಿಸಿಎಂ ಡಾ. ಪರಮೇಶ್ವರ್ ಹುಟ್ಟುಹಬ್ಬದಂದು ಸಮಾಜ ಸೇವಾ...

ಅಸಹಾಯಕ ಮಹಿಳೆ ದತ್ತು ಪಡೆದ ಇಕ್ಬಾಲ್ ಅಹಮದ್; ಡಿಸಿಎಂ ಡಾ. ಪರಮೇಶ್ವರ್ ಹುಟ್ಟುಹಬ್ಬದಂದು ಸಮಾಜ ಸೇವಾ ಕಾರ್ಯ

ತುಮಕೂರು, ಆ. ೮- ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ಅವರು ನಗರದ ಅಸಹಾಯಕ ಒಬ್ಬಂಟಿ ಮಹಿಳೆ, ವಿಕಲಚೇತನೆಯಾದ ಬ್ರಾಹ್ಮಣ ಸಮುದಾಯದ ಮಹಿಳೆಯನ್ನು ದತ್ತು ಸ್ವೀಕಾರ ಮಾಡಿ, ಅವರ ಜೀವಿತಾವಧಿವರೆಗೆ ಆರೋಗ್ಯ, ಆರೈಕೆ, ಜೀವನ ನಿರ್ವಹಣೆಯ ಹೊಣೆಯನ್ನು ತಾವೇ ವಹಿಸಿಕೊಳ್ಳುವುದಾಗಿ ಪ್ರಕಟಿಸಿದರು.


ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ಜಿಲ್ಲಾ ಸೇವಾದಳ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಬದುಕನ್ನು ಮುಡುಪಾಗಿಟ್ಟದ್ದ ಶಿವಪ್ರಸಾದ್ ಅವರು ಇತ್ತೀಚೆಗೆ ನಿಧನರಾದರು. ತಮ್ಮ ಸಹೋದರಿ, ಅವಿವಾಹಿತೆ, ವಿಕಲಚೇತನರಾದ ಹಂಸಮಾಲಿನಿ ಅವರಿಗೆ ಶಿವಪ್ರಸಾದ್ ಅವರು ಆಧಾರ ಸ್ತಂಭವಾಗಿದ್ದರು. ಶಿವಪ್ರಸಾದ್ ಅವರ ಅಕಾಲಿಕ ಮರಣದಿಂದ ಹಂಸಮಾಲಿನಿ ಅವರು ದಿಕ್ಕಿಲ್ಲದಂತಾದರು. ಇಂತಹ ಪರಿಸ್ಥಿತಿ ಅರ್ಥಮಾಡಿಕೊಂಡ ಇಕ್ಬಾಲ್ ಅಹಮದ್ ಅವರು ತಮ್ಮ ಆತ್ಮೀಯ ಗೆಳೆಯ ಶಿವಪ್ರಸಾದ್ ಅವರ ಸ್ಥಾನದಲ್ಲಿ ನಿಂತು ಅವರ ಸಹೋದರಿ ಹಂಸಮಾಲಿನಿ ಅವರಿಗೆ ಸಹೋದರರಾಗಿ ಸಲಹುವ ಸಂಕಲ್ಪ ಮಾಡಿದರು.


ಇದರ ಅಂಗವಾಗಿ ನಡೆದ ಸಮಾರಂಭದಲ್ಲಿ ಮಾತನಾಡಿದ ಇಕ್ಬಾಲ್ ಅಹಮದ್, ಬರಗಾಲ ಪರಿಸ್ಥಿತಿ ಇರುವುದರಿಂದ ಕಾಂಗ್ರೆಸ್ ಕಾರ್ಯಕರ್ತರು ವಿಜೃಂಭಣೆಯಿಂದ ತಮ್ಮ ಜನ್ಮದಿನ ಆಚರಿಸಬೇಡಿ, ಸಾಮಾಜಿಕ ಸೇವೆಯಾಗಿ, ಅಸಹಾಯಕರಿಗೆ ಸಹಾಯ ಮಾಡುವ ರೀತಿಯಲ್ಲಿ ಆಚರಿಸಿ ಎಂದು ತಮ್ಮ ನಾಯಕರಾದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಹೇಳಿದ್ದರು. ಸೇವಾ ಕಾರ್ಯಕ್ರಮವಾಗಿ ಗೆಳೆಯ ಶಿಪ್ರಸಾದ್ ಅವರ ಸಹೋದರಿಯನ್ನು ದತ್ತು ಪಡೆಯುತ್ತಿರುವುದಾಗಿ ಹೇಳಿದರು.


ಯಾವುದೇ ಆದಾಯ ಮೂಲವಿಲ್ಲದ, ಒಬ್ಬಂಟಿ ಮಹಿಳೆ ಹಂಸಮಾಲಿನಿ ಅವರಿಗೊಂದು ಮನೆ ವ್ಯವಸ್ಥೆ ಮಾಡುವ ಸಂಬಂಧ ಕಾಂಗ್ರೆಸ್ ಮುಖಂಡ ರೇವಣಸಿದ್ಧಯ್ಯ ಅವರಿಗೆ ಇಕ್ಬಾಲ್ ಅಹಮದ್ ಅವರು ೫೦ ಸಾವಿರ ರೂ.ಗಳ ಮುಂಗಡ ಹಣ ನೀಡಿದರು. ಮುಂದೆ ಹಂಸಮಾಲಿನಿಯವರ ಊಟ, ವಸತಿ, ಆರೋಗ್ಯ ಮತ್ತಿತರ ಎಲ್ಲಾ ಜವಾಬ್ದಾರಿಯನ್ನು ಒಟ್ಟಾಗಿ ನಿರ್ವಹಿಸೋಣ ಎಂದು ಕಾಂಗ್ರೆಸ್ ಮುಖಂಡರಿಗೆ ಹೇಳಿದರು.


ಸಮಾಜದಲ್ಲಿ ಎಲ್ಲವನ್ನೂ ಜಾತಿಯಿಂದಲೇ ನೋಡಬಾರದು. ಜಾತಿ, ಧರ್ಮಕ್ಕಿಂಥಾ ಮಾನವೀಯತೆ ದೊಡ್ಡದು. ಶಿವಪ್ರಸಾದ್ ಅವರು ಮೃತಪಟ್ಟಾಗ ಅವರ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿದ ನಂತರ ಮುಸ್ಲಿಂ ಸಮುದಾಯದ ಅಮ್ಜದ್ ಅವರು ಶಿವಪ್ರಸಾದ್ ಅವರ ಅಸ್ಥಿಯನ್ನು ಶ್ರೀರಂಗಪಟ್ಟಣದ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿಗೆ ಬಿಟ್ಟು ಬಂದರು. ಇಲ್ಲಿ ಬ್ರಾಹ್ಮಣ, ಮುಸ್ಲಿಂ ಎಂಬ ಬೇಧವಿಲ್ಲ, ಮಾನವೀಯತೆ ಮುಖ್ಯವಾಗಿದೆ ಎಂದು ಹೇಳಿದರು.


ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಹುಟ್ಟುಹಬ್ಬದ ಪ್ರಯುಕ್ತ ವಿವಿಧ ಸೇವಾಕಾರ್ಯಗಳನ್ನು ಮಾಡಲಾಗುತ್ತಿದೆ. ಅಸಹಾಯಕ ಕುಟುಂಬದವರು ವ್ಯಾಪಾರ ಆರಂಭಿಸಿ ಬದುಕು ಕಟ್ಟಿಕೊಳ್ಳಲು ತಳ್ಳುವ ಗಾಡಿಕೊಟ್ಟು, ಅವರಿಗೆ ಇಕ್ಬಾಲ್ ಅಹಮದ್ ಮೂಲ ಬಂಡವಾಳ ನೀಡಿದರು. ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಊಟದ ವ್ಯವಸ್ಥೆ ಮಾಡಲಾಯಿತು. ಇನ್ನೂ ಮುಂತಾದ ಸೇವಾಕಾರ್ಯಗಳನ್ನು ಪಕ್ಷದ ಮುಖಂಡರೊಂದಿಗೆ ಮಾಡುತ್ತಿರುವುದಾಗಿ ಇಕ್ಬಾಲ್ ಅಹಮದ್ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಷಣ್ಮುಖಪ್ಪ, ರೇವಣಸಿದ್ಧಯ್ಯ, ಸಿದ್ಧಲಿಂಗೇಗೌಡ, ಬೈಲಪ್ಪ, ಶಿವಾಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಯಾಜ್, ಮುಖಂಡರಾದ ಫೀರ್, ರಮೇಶ್, ಅಸ್ಲಾಂಖಾನ್, ಆಲಂ, ರಾಮಯ್ಯ, ಚಕ್ರವರ್ತಿ ಪ್ರಕಾಶ್ ಮತ್ತಿತರರು ಉಪಸ್ಥಿರಿದ್ದರು.