Home ಜಿಲ್ಲೆ ತುಮಕೂರು ಮಕ್ಕಳು ಶಿಕ್ಷಣದ ಜತೆಗೆ ಸಂಸ್ಕಾರವಂತರಾಗಬೇಕು: ಸಿದ್ದರಬೆಟ್ಟಶ್ರೀ

ಮಕ್ಕಳು ಶಿಕ್ಷಣದ ಜತೆಗೆ ಸಂಸ್ಕಾರವಂತರಾಗಬೇಕು: ಸಿದ್ದರಬೆಟ್ಟಶ್ರೀ

ಕೊರಟಗೆರೆ, ಆ. ೮- ಶಾಲಾ-ಕಾಲೇಜುಗಳಲ್ಲಿ ಹೆಚ್ಚು ಅಂಕಗಳಿಸಿ ಪ್ರತಿಭಾನ್ವಿತರಾದರೆ ಸಾಲದು, ಮನೆಯಲ್ಲಿ ತಂದೆ-ತಾಯಿಯ’ನ್ನು ಗೌರಿಸುವುದರ ಮೂಲಕ ಮಕ್ಕಳು ಸಂಸ್ಕಾರವಂತರಾಗಬೇಕು ಎಂದು ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.


ತಾಲ್ಲೂಕಿನ ಸಿದ್ದರಬೆಟ್ಟದ ಬಾಳೆಹೊನ್ನೂರು ಶಾಖಾ ಮಠದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಿದ್ದ ತಾಲ್ಲೂಕು ವೀರಶೈವ ನೌಕರರ ಸಮಾವೇಶ, ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.


ಅಧುನಿಕತೆ ಹೆಚ್ಚಿದಂತೆ ಪ್ರಸ್ತುತ ತಂದೆ-ತಾಯಂದಿರನ್ನು ನಿಕೃಷ್ಟವಾಗಿ ಕಾಣುವಂತಹ ಸಂಸ್ಕೃತಿ ಹೆಚ್ಚುತ್ತಿದೆ.ಅಲ್ಲದೇ ಎಲ್ಲೆಡೆ ವೃದ್ದಾಶ್ರಮಗಳು ಹೆಚ್ಚುತ್ತಿರುವುದು ಸಮಾಜದಲ್ಲಿ ಆತಂಕಕಾರಿ ಬೆಳವಣಿಗೆ. ಮಕ್ಕಳಿಗಾಗಿ ಪೋಷಕರು ಕಷ್ಟಪಡುವುದನ್ನು ಮಕ್ಕಳಿಗೆ ತಿಳಿಸಬೇಕು ಮಕ್ಕಳಿಗೆ ಕಾಳಜಿ, ಪ್ರವೃತ್ತಿ ಜತೆಗೆ ಸಂಸ್ಕಾರವನ್ನು ಕಲಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.


ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ ರುದ್ರೇಶ್ ಮಾತನಾಡಿ, ಸಮಾಜದಲ್ಲಿ ಹೆಚ್ಚು ಪ್ರತಿಭಾನ್ವಿತರಿದ್ದಾರೆ ಅವರಿಗೆ ಶೈಕ್ಷಣಿಕವಾಗಿ ಗುರುತಿಸಿ ಪ್ರೋತ್ಸಾಹಿಸುವಂತಹ ಕೆಲಸ ಆಗಬೇಕು, ವಿದ್ಯಾರ್ಥಿಗಳು ಅತ್ಯುನ್ನತ ಹುದ್ದೆಗಳಾದ ಐಎಎಸ್, ಐಪಿಎಸ್ ಮತ್ತು ಕೆಎಎಸ್ ಹುದ್ದೆಗಳಿಗೇರುವಂತೆ ಪ್ರೇರೇಪಿಸಬೇಕು. ಇದಕ್ಕಾಗಿ ಉತ್ತಮ ಪರಿಸರ ನಿರ್ಮಾಣ ಮಾಡಬೇಕು ಎಂದರು.


ಕಾಂಗ್ರೆಸ್ ಮುಖಂಡ ಶಶಿ ಹುಲಿಕುಂಟೆ ಮಾತನಾಡಿ, ಸಂಘ ಸಂಸ್ಥೆಗಳು ಕೇವಲ ಹೆಚ್ಚು ಅಂಕಗಳಿಸಿದವರನ್ನು ಮಾತ್ರ ಸನ್ಮಾನಿಸುತ್ತಾರೆ. ಇದರ ಜತೆಗೆ ಫೇಲ್ ಆದವರು ಮತ್ತು ಕಡಿಮೆ ಅಂಕ ಗಳಿಸಿದವರಿಗೆ ಹೆಚ್ಚು ಹೆಚ್ಚು ಪ್ರೋತ್ಸಾಹಿಸುವಂತಹ ಸಮಾಜದ ಮುನ್ನಲೆಗೆ ಬರಲು ಇರುವಂತಹ ಅವಕಾಶಗಳನ್ನು ಅವರಿಗೆ ರೂಪಿಸಬೇಕು ಮತ್ತು ದೊಡ್ಡ ಮಟ್ಟದ ಸಾಧನೆ ಮಾಡಲು ವೇದಿಕೆಗಳನ್ನು ಕಲ್ಪಿಸಬೇಕು, ಸಮಾಜದಲ್ಲಿ ಹೆಚ್ಚು ಅಂಕ ಗಳಿಸಿದವರಿಗಿಂತ ಕಡಿಮೆ ಅಂಕ ಗಳಿಸಿದವರು ಮತ್ತು ಫೇಲ್ ಆದವರೇ ಹೆಚ್ಚು ಸಮಾಜಮುಖಿಯಾಗಿ, ಬದುಕುತ್ತಾರೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ತಾಲ್ಲೂಕು ನೌಕರರ ಸಂಘದ ಗೌರವಾಧ್ಯಕ್ಷ ಬಿ.ಎಸ್. ಜಗದೀಶ್, ಅಧ್ಯಕ್ಷ ಎನ್.ಇ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ಎಂ. ರಾಜಶೇಖರ್, ಸಹ ಕಾರ್ಯದರ್ಶಿ ಕೆ.ಎನ್ ಬಸವರಾಜು, ಉಪಾಧ್ಯಕ್ಷ ಷಡಕ್ಷರಾಧ್ಯ ಸೇರಿದಂತೆ ಮುಖಂಡರಾದ ಡಾ. ಸಂತೋಶ್, ರಾಜೇಶ್,ಸುರೇಶ್, ವಿನಯ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.


ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಿವಿಧ ಇಲಾಖೆಗಳ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.