
ಬೆಂಗಳೂರು, ಆ.೭-ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಎಸ್ಐಆರ್ ಹಿನ್ನೆಲೆಯಲ್ಲಿ ಭರ್ತಿ ಮಾಡಿರುವ ಗಣತಿ ನಮೂನೆಗಳನ್ನು ಸಲ್ಲಿಸಲು ಆಗಸ್ಟ್ ೮ರವರೆಗೆ ಅವಕಾಶವಿದ್ದು, ಬಾಕಿ ಉಳಿದಿರುವ ನಮೂನೆಗಳನ್ನು ನಾಳೆಯೊಳಗಾಗಿ ಸಲ್ಲಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮನವಿ ಮಾಡಿದ್ದಾರೆ.
ಜಿಬಿಎ ಕೇಂದ್ರ ಕಚೇರಿಯಲ್ಲಿ ಇಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜೂನ್ ೩೦ರಿಂದ ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸುತ್ತಿದ್ದಾರೆ. ಮತದಾರರು ಭರ್ತಿ ಮಾಡಿದ ನಮೂನೆಗಳನ್ನು ಶೀಘ್ರವಾಗಿ ಸಲ್ಲಿಸುವಂತೆ ಮನವಿ ಮಾಡಿದರು.
ವಿಶೇಷ ಸಮಗ್ರ ಪರಿಷ್ಕರಣೆ ವೇಳೆ ಗೈರು, ಸ್ಥಳಾಂತರಗೊಂಡ, ಮೃತಪಟ್ಟ, ನಕಲಿ ಹಾಗೂ ಇತರೆ (ಎಎಸ್ಎಸ್ಡಿಡಿಒ) ಮತದಾರರನ್ನು ಗುರುತಿಸಲಾಗಿದ್ದು, ಈ ಮಾಹಿತಿಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಜಿಬಿಎ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಏಜೆಂಟ್ಗಳಿಗೂ ಮಾಹಿತಿ ನೀಡಲಾಗಿದೆ.
ಎಎಸ್ ಡಿಡಿಒ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಅಥವಾ ದೂರುಗಳಿದ್ದರೆ ಸಂಬಂಧಪಟ್ಟ ಅಥವಾ ಮತದಾರರ ನೋಂದಣಾಧಿಕಾರಿ ಅವರನ್ನು ಸಂಪರ್ಕಿಸಿ ಸಲ್ಲಿಸಬಹುದು. ದೂರು ಹಾಗೂ ಆಕ್ಷೇಪಣೆಗಳನ್ನು ತ್ವರಿತವಾಗಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಹೇಶ್ವರ್ ರಾವ್ ತಿಳಿಸಿದರು.
ಆಗಸ್ಟ್ ೧೭ರಂದು ಕರಡು ಮತದಾರರ ಪಟ್ಟಿ
ಆಗಸ್ಟ್ ೧೭ರಂದು ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ, ಪಟ್ಟಿಯಲ್ಲಿ ಹೆಸರು ಇಲ್ಲದ ಅರ್ಹ ಮತದಾರರು ಹಕ್ಕು ಮತ್ತು ಆಕ್ಷೇಪಣೆ ಪ್ರಕ್ರಿಯೆಯಡಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಭೆಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಇನ್ನೂ ಕೆಲವು ಮತದಾರರಿಂದ ಗಣತಿ ನಮೂನೆಗಳನ್ನು ಸಂಗ್ರಹಿಸಬೇಕಿರುವುದರಿಂದ ಸಲ್ಲಿಕೆ ಅವಧಿಯನ್ನು ವಿಸ್ತರಿಸುವಂತೆ ಮನವಿ ಮಾಡಿದರು. ಈ ಕುರಿತು ಚುನಾವಣಾ ಆಯೋಗದ ನಿರ್ದೇಶನದಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮಹೇಶ್ವರ್ ರಾವ್ ಭರವಸೆ ನೀಡಿದರು.
ಸಭೆಯಲ್ಲಿ ವಿಶೇಷ ಆಯುಕ್ತೆ ಸುಷಮಾ ಗೋಡಬೋಲೆ, ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ್ ಸುನೀಲ್ ಕುಮಾರ್, ಕೆ.ಎನ್. ರಮೇಶ್, ಜಗದೀಶ್ ಸೇರಿದಂತೆ ಚುನಾವಣಾ ವಿಭಾಗದ ಅಧಿಕಾರಿಗಳು, ಎಡಿಸಿ ಬೆಂಗಳೂರು ಜಗದೀಶ್ ನಾಯ್ಕ್ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

































