Home ಜಿಲ್ಲೆ ತುಮಕೂರು ವಿದ್ಯೆ ಯಾರೂ ಕದಿಯಲಾಗದ ಸಂಪತ್ತು: ಗಾಯತ್ರಿಬಾಯಿ

ವಿದ್ಯೆ ಯಾರೂ ಕದಿಯಲಾಗದ ಸಂಪತ್ತು: ಗಾಯತ್ರಿಬಾಯಿ

ಪಾವಗಡ, ಜು. ೨೭- ಹಣ, ಆಸ್ತಿ ಮತ್ತು ಶ್ರೀಮಂತಿಕೆಯನ್ನು ಯಾರಾದರೂ ಕದಿಯಬಹುದು. ಆದರೆ ನೀವು ಪಡೆದ ಉನ್ನತ ಶಿಕ್ಷಣವನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ ಎಂದು ತೇಜಸ್ ಚಾರಿಟಬಲ್ ಅಂಡ್ ಎಜುಕೇಶನಲ್ ಟ್ರಸ್ಟ್ ಕಾರ್ಯದರ್ಶಿ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಗಾಯತ್ರಿಬಾಯಿ ತಿಳಿಸಿದರು.


ಪಟ್ಟಣದಲ್ಲಿ ನಡೆದ ತೇಜಸ್ ಚಾರಿಟಬಲ್ ಅಂಡ್ ಎಜುಕೇಶನಲ್ ಟ್ರಸ್ಟ್‌ನ ವಾರ್ಷಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಕುಟುಂಬದ ಹಳೆಯ ದಿನಗಳನ್ನು ಮೆಲಕು ಹಾಕಿ ನಮ್ಮ ತಂದೆ-ತಾಯಿ ಹಾಗೂ ಅತ್ತೆ-ಮಾವ ಅತ್ಯಂತ ಕಷ್ಟದ ಜೀವನ ನಡೆಸಿದರೂ ನಮಗೆ ಶಿಕ್ಷಣ ಕೊಡಿಸುವಲ್ಲಿ ಎಂದೂ ಹಿಂದೆ ಬೀಳಲಿಲ್ಲ. ಅವರ ಆ ತ್ಯಾಗವೇ ಇಂದು ನಾವು ಈ ಹಂತಕ್ಕೆ ತಲುಪಲು ಕಾರಣ. ಇಂದಿನ ಪ್ರತಿಭಾವಂತ ವಿದ್ಯಾರ್ಥಿಗಳು ಸಹ ತಂದೆ-ತಾಯಿಯ ಶ್ರಮವನ್ನು ಅರ್ಥೈಸಿಕೊಂಡು, ಕಷ್ಟಪಟ್ಟು ಓದಿ ಉನ್ನತ ಹುದ್ದೆಗಳನ್ನು ಪಡೆಯಬೇಕು ಎಂದು ಕರೆ ನೀಡಿದರು.


ಹೆತ್ತವರಿಗೆ ಸಮಾಜದಲ್ಲಿ ಒಳ್ಳೆಯ ಹೆಸರು ತಂದುಕೊಟ್ಟು, ಅವರನ್ನು ಗೌರವದಿಂದ ನೋಡಿಕೊಳ್ಳಬೇಕು. ನನ್ನ ಮಗ ಸಿಇಟಿ ಪರೀಕ್ಷೆಗೆ ಪಟ್ಟ ಶ್ರಮವನ್ನು ಕಣ್ಣಾರೆ ಕಂಡಿದ್ದರಿಂದ, ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಟ್ರಸ್ಟ್‌ನಿಂದ ಉಚಿತ ಸಿಇಟಿ ತರಬೇತಿ ಕೇಂದ್ರ ಪ್ರಾರಂಭಿಸಿದ್ದೆವು. ಮೊದಲ ವರ್ಷ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಎರಡನೇ ವರ್ಷ ಹಾಜರಾತಿ ಕಡಿಮೆಯಾದ ಕಾರಣ ಅದನ್ನು ನಿಲ್ಲಿಸಲಾಗಿತ್ತು.

ವಿದ್ಯಾರ್ಥಿಗಳು ಬರುವುದಾದರೆ ಮತ್ತೆ ಈ ಸಿಇಟಿ ಕೋಚಿಂಗ್ ಸೆಂಟರ್ ಪ್ರಾರಂಭಿಸಲು ನಾವು ಸಿದ್ಧರಿದ್ದೇವೆ ಎಂದರು.


ಸಮಾಜದಲ್ಲಿ ಶಿಕ್ಷಣವೇ ಅತಿದೊಡ್ಡ ಆಸ್ತಿ. ವಿದ್ಯಾರ್ಥಿಗಳು ಈ ವಯಸ್ಸಿನಲ್ಲಿ ಸಮಯ ವ್ಯರ್ಥ ಮಾಡದೆ ಗುರಿ ತಲುಪಲು ಶ್ರಮಿಸಬೇಕು. ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಕ್ಕಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ನನ್ನ ಮಗ ತೇಜಸ್ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು, ಕಾಲಿಗೆ ಪೆಟ್ಟಾಗಿರುವ ಕಾರಣ ಈ ಸಮಾರಂಭಕ್ಕೆ ಬರಲಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ತಮ್ಮ ಜನ್ಮದಿನವನ್ನು ಆಚರಿಸಿದ ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ಧನ್ಯವಾದ ತಿಳಿಸಿದರು.


ಟ್ರಸ್ಟ್‌ನ ಮಾರ್ಗದರ್ಶಕರಾದ ಶಂಕರಮೂರ್ತಿ ಮಾತನಾಡಿ, ಸುಮಾರು ವರ್ಷಗಳಿಂದ ಟ್ರಸ್ಟ್ ವತಿಯಿಂದ ಅನೇಕ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಪ್ರತಿ ವರ್ಷ ಬಡ ಕುಟುಂಬದಿಂದ ಬಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ನನ್ನ ಪತ್ನಿಯ ಆಸೆಯಾಗಿತ್ತು. ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಸೀಮಿತವಾಗದೆ ಉತ್ತಮ ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ಗ್ರಾಮೀಣ ಭಾಗದ ಪ್ರತಿಭಾವಂತ ಮಕ್ಕಳಿಗೆ ಸೂಕ್ತ ವೇದಿಕೆ ಒದಗಿಸುವುದೇ ನಮ್ಮ ಟ್ರಸ್ಟ್‌ನ ಪ್ರಮುಖ ಉದ್ದೇಶವಾಗಿದ್ದು, ಮುಂಬರುವ ದಿನಗಳಲ್ಲೂ ಸಹ ಇಂತಹ ಹಲವು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.


ಟ್ರಸ್ಟ್‌ನ ಅಧ್ಯಕ್ಷ ಹಾಗೂ ಮಾಜಿ ಶಾಸಕರಾದ ಸೋಮ್ಲಾನಾಯ್ಕ್ ಮಾತನಾಡಿ, ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಈ ರೀತಿಯ ಪ್ರೋತ್ಸಾಹ ನೀಡುವ ಮೂಲಕ ಅವರಲ್ಲಿ ಶೈಕ್ಷಣಿಕ ಆಸಕ್ತಿ ಹೆಚ್ಚಾಗುತ್ತದೆ. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಕುಟುಂಬಸ್ಥರಿಗೆ ಧನ್ಯವಾದಗಳು. ಶಿಕ್ಷಣ ಕ್ಷೇತ್ರದಲ್ಲಿ ತಾಲ್ಲೂಕಿನ ವಿದ್ಯಾರ್ಥಿಗಳು ಮತ್ತಷ್ಟು ಸಾಧನೆ ಮಾಡಬೇಕು. ಯುವಜನತೆ ಸನ್ಮಾರ್ಗದಲ್ಲಿ ನಡೆದು ಸಮಾಜದ ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕು. ಟ್ರಸ್ಟ್ ಕೈಗೊಳ್ಳುವ ಪ್ರತಿಯೊಂದು ಜನಪರ ಕಾರ್ಯಗಳಿಗೆ ನಮ್ಮ ಸಂಪೂರ್ಣ ಬೆಂಬಲ ಸದಾ ಇರಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ನ ಖಜಾಂಚಿ ಹರ್ಷಿತ, ರಾಮಕೃಷ್ಣ ಮಂಜುನಾಥ ದೇವನಾಯ್ಕ್ ಮುಖ್ಯ ಶಿಕ್ಷಕರಾದ ನಾಗರಾಜ ನಾಯ್ಕ ಸೇರಿದಂತೆ ಟ್ರಸ್ಟ್‌ನ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.