Home ಮುಖಪುಟ ಸುದ್ದಿ ಮಧ್ಯಪ್ರಾಚ್ಯ ಬಿಕ್ಕಟ್ಟು: ಕಚ್ಚಾ ತೈಲ ದುಬಾರಿ

ಮಧ್ಯಪ್ರಾಚ್ಯ ಬಿಕ್ಕಟ್ಟು: ಕಚ್ಚಾ ತೈಲ ದುಬಾರಿ

ವಾಷಿಂಗ್ಟನ್ / ದುಬೈ,ಜು.೨೩-ಮಧ್ಯಪ್ರಾಚ್ಯದಲ್ಲಿ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಮಿಲಿಟರಿ ಉದ್ವಿಗ್ನತೆ ಹಾಗೂ ಅಮೆರಿಕ-ಇರಾನ್ ನಡುವಿನ ನೇರ ಸಂಘರ್ಷದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಏರಿಕೆಯಾಗಿವೆ. ಬ್ರೆಂಟ್ ಕಚ್ಚಾ ತೈಲ ದರವು ಶೇಕಡಾ ೨ ರಷ್ಟು ಏರಿಕೆ ಕಾಣುವ ಮೂಲಕ ಪ್ರತಿ ಬ್ಯಾರೆಲ್‌ಗೆ $೯೬ ದಾಟಿದ್ದು, ಆರು ವಾರಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಇತ್ತ ಡಬ್ಲ್ಯೂಟಿಐ ಕಚ್ಚಾ ತೈಲದ ದರವೂ ಬ್ಯಾರೆಲ್‌ಗೆ $೮೮ ರ ಗಡಿಯನ್ನು ದಾಟಿದೆ.


ಕೆಂಪು ಸಮುದ್ರದಲ್ಲಿ ವಾಣಿಜ್ಯ ತೈಲ ಟ್ಯಾಂಕರ್‌ಗಳ ಮೇಲೆ ಯೆಮೆನ್‌ನ ಹೌತಿ ಬಂಡುಕೋರರು ನಡೆಸುತ್ತಿರುವ ದಾಳಿ ಹಾಗೂ ಇರಾನ್ ಬೆಂಬಲಿತ ಗುರಿಗಳ ಮೇಲೆ ಅಮೆರಿಕ ಸತತವಾಗಿ ನಡೆಸುತ್ತಿರುವ ವೈಮಾನಿಕ ದಾಳಿಗಳು ಈ ಹಠಾತ್ ದರ ಏರಿಕೆಗೆ ಮುಖ್ಯ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
$೧೦೦ರ ಗಡಿ ತಲುಪುವ ಎಚ್ಚರಿಕೆ!
ಇಂಧನ ಮಾರುಕಟ್ಟೆಯ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾದ ಖಿಡಿಚಿಜiಟಿg.ಛಿom ನ ಸಿಇಒ ಹಾಗೂ ಜಾಗತಿಕ ತೈಲ ತಜ್ಞ ಪೀಟರ್ ಮೆಕ್‌ಗೈರ್,
“ಪ್ರಸ್ತುತ ಜಾಗತಿಕ ಮಾರುಕಟ್ಟೆಗಳು ಉದ್ವಿಗ್ನತೆಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಿವೆ. ಬ್ರೆಂಟ್ ತೈಲ ದರ $೯೭ರ ಸಮೀಪದಲ್ಲಿದೆ. ಶಾಂತಿ ಮಾತುಕತೆಗೆ ಎರಡೂ ಕಡೆಯಿಂದ ಯಾವುದೇ ಆಸಕ್ತಿ ಕಂಡುಬರುತ್ತಿಲ್ಲ. ಹೀಗೆಯೇ ಮುಂದುವರಿದರೆ ಈ ತಿಂಗಳಾಂತ್ಯದ ವೇಳೆಗೆ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ $೧೦೦ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ,” ಎಂದು ಎಚ್ಚರಿಸಿದ್ದಾರೆ.

ಯುಎಸ್ ಸತತ ದಾಳಿ: ಟ್ರಂಪ್ ಸರಣಿ ಎಚ್ಚರಿಕೆ


ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇರ ನಿರ್ದೇಶನದ ಮೇರೆಗೆ ಯುಎಸ್ ಪಡೆಗಳು ಸತತ ೧೨ನೇ ರಾತ್ರಿಯೂ ಇರಾನಿನ ಮಿಲಿಟರಿ ಗುರಿಗಳ ಮೇಲೆ ಭಾರಿ ದಾಳಿ ನಡೆಸಿವೆ.


ವಾಣಿಜ್ಯ ಹಡಗುಗಳು ಮತ್ತು ನಾಗರಿಕ ನಾವಿಕರ ಮೇಲಿನ ಬೆದರಿಕೆಯನ್ನು ಹತೋಟಿಗೆ ತರಲು ಇರಾನ್‌ನ ಸೈನಿಕ ಸಾಮರ್ಥ್ಯವನ್ನು ಕುಗ್ಗಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಅಧಿಕೃತವಾಗಿ ಸ್ಪಷ್ಟಪಡಿಸಿದೆ.


ಮತ್ತೊಂದೆಡೆ, ತಮ್ಮ ’ಟ್ರೂತ್ ಸೋಶಿಯಲ್’ ಜಾಲತಾಣದಲ್ಲಿ ಇರಾನ್‌ಗೆ ತೀವ್ರ ಎಚ್ಚರಿಕೆ ನೀಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್,
“ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಪಡೆಗಳು ಯಾವುದೇ ಹಡಗಿನ ಮೇಲೆ ಕ್ಷಿಪಣಿ ಅಥವಾ ಡ್ರೋನ್ ದಾಳಿ ನಡೆಸಿದರೂ, ಪ್ರತಿಯಾಗಿ ಅಮೆರಿಕ ಪಡೆಗಳು ಇರಾನ್‌ನ ಸೇತುವೆಗಳು, ವಿದ್ಯುತ್ ಸ್ಥಾವರಗಳು ಹಾಗೂ ರಾಜಧಾನಿ ಟೆಹ್ರಾನ್ ಬಳಿಯ ಪ್ರಮುಖ ಮೂಲಸೌಕರ್ಯಗಳ ಮೇಲೆ ಬಾಂಬ್ ದಾಳಿ ನಡೆಸಿ ನಾಶಪಡಿಸಲಿವೆ,” ಎಂದು ಎಚ್ಚರಿಸಿದ್ದಾರೆ.

ಇರಾನ್ ತಿರುಗೇಟು: ’ಕಣ್ಣಿಗೆ ಕಣ್ಣು’ ರಕ್ಷಣಾ ನೀತಿ


ಅಮೆರಿಕದ ಈ ಬೆದರಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, ಇರಾನ್‌ನ ರಕ್ಷಣಾ ಸಿದ್ಧಾಂತವು ಇನ್ಮುಂದೆ ’ಕಣ್ಣಿಗೆ ಕಣ್ಣು’ ಎಂಬ ತತ್ತ್ವದ ಮೇಲೆ ಆಧಾರಿತವಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಮೆರಿಕದ ಯಾವುದೇ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಅವರು ಗುಡುಗಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಈ ಸಂಘರ್ಷ ಹೀಗೆಯೇ ಮುಂದುವರಿದರೆ, ಮುಂಬರುವ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಇಂಧನ ಅಭಾವ ಹಾಗೂ ತೀವ್ರ ಹಣದುಬ್ಬರ ಎದುರಾಗುವ ಭೀತಿ ಎದುರಾಗಿದೆ.