
ಹೊಸದೆಹಲಿ.ಜು.೨೩:ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿ ಮೆಟ್ರೋ ರೈಲು ನಿಗಮ ಸತತ ಎರಡನೇ ದಿನವೂ ೧೬ ಪ್ರಮುಖ ಮೆಟ್ರೋ ನಿಲ್ದಾಣಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಇಂದು ಬೆಳಿಗ್ಗೆ ೭:೩೦ ರಿಂದ ಮುಂದಿನ ಆದೇಶದವರೆಗೆ ಈ ನಿಲ್ದಾಣಗಳಲ್ಲಿ ಸಾರ್ವಜನಿಕರ ಪ್ರವೇಶ ಹಾಗೂ ನಿರ್ಗಮನವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ ಎಂದು ಡಿಎಮ್‌ಆರ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಮೆಟ್ರೋ ನಿಲ್ದಾಣಗಳ ಪ್ರವೇಶ ಹಾಗೂ ನಿರ್ಗಮನವನ್ನು ಮುಚ್ಚಲಾಗಿದ್ದರೂ, ಪ್ರಯಾಣಿಕರ ಅನುಕೂಲಕ್ಕಾಗಿ ರಾಜೀವ್ ಚೌಕ್, ಮಂಡಿ ಹೌಸ್ ಮತ್ತು ಸೆಂಟ್ರಲ್ ಸೆಕ್ರೆಟರಿಯೇಟ್ ನಿಲ್ದಾಣಗಳಲ್ಲಿ ಮಾರ್ಗ ಬದಲಾಯಿಸುವ ಸೌಲಭ್ಯ ಮುಕ್ತವಾಗಿರುತ್ತದೆ.
ಲೋಕ್ ಕಲ್ಯಾಣ್ ಮಾರ್ಗ,ರಾಜೀವ್ ಚೌಕ್ (ಪ್ರವೇಶ/ನಿರ್ಗಮನ ಬಂದ್),ಪಟೇಲ್ ಚೌಕ್,ರಾಮಕೃಷ್ಣ ಆಶ್ರಮ ಮಾರ್ಗ,ಬಾರಾಖಂಬಾ ರೋಡ್ ಸುಪ್ರೀಂ ಕೋರ್ಟ್,ಸೇವಾ ತೀರ್ಥ,ಜನಪಥ್,ಮಂಡಿ ಹೌಸ್ (ಪ್ರವೇಶ/ನಿರ್ಗಮನ ಬಂದ್),ಸೆಂಟ್ರಲ್ ಸೆಕ್ರೆಟರಿಯೇಟ್ (ಪ್ರವೇಶ/ನಿರ್ಗಮನ ಬಂದ್)
ಐಟಿಒ ,ದೆಹಲಿ ಗೇಟ್,ಇಂದ್ರಪ್ರಸ್ಥ,ಖಾನ್ ಮಾರ್ಕೆಟ್,ಜೋರ್ ಬಾಗ್,ಶಿವಾಜಿ ಸ್ಟೇಡಿಯಂ ಮೇಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ.
ಜುಲೈ ೨೦ ರಂದು ನಡೆದ ’ಸಂಸದ್ ಚಲೋ’ ಮೆರವಣಿಗೆಯ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ದೆಹಲಿ ಪೊಲೀಸರು ಲಾಠಿ ಪ್ರಹಾರ ಹಾಗೂ ಅಶ್ರುವಾಯು ಪ್ರಯೋಗಿಸಿದ್ದರು. ಪ್ರಸ್ತುತ ಜಂತರ್ ಮಂತರ್‌ನಲ್ಲಿ ಧರಣಿ ಸತ್ಯಾಗ್ರಹ ಮುಂದುವರಿದಿದ್ದು, ಭದ್ರತಾ ಹಿತದೃಷ್ಟಿಯಿಂದ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.































