Home ಸಿನೆಮಾ ಅಣ್ಣ–ತಮ್ಮಂದಿರ ಜೋಡಿ: ‘ಶ್ರೀರಸ್ತು’ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್ ಎಂಟ್ರಿ

ಅಣ್ಣ–ತಮ್ಮಂದಿರ ಜೋಡಿ: ‘ಶ್ರೀರಸ್ತು’ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್ ಎಂಟ್ರಿ

ಬೆಂಗಳೂರು, ಜು,8- ಸ್ಯಾಂಡಲ್‌ವುಡ್‌ನಲ್ಲಿ ಮೊದಲ ಬಾರಿಗೆ ಸಹೋದರರಾದ ಪ್ರಜ್ವಲ್‌ ದೇವರಾಜ್ ಮತ್ತು ಪ್ರಣಾಮ್‌ ದೇವರಾಜ್ ಒಂದೇ ಚಿತ್ರದಲ್ಲಿ ತೆರೆ ಹಂಚಿಕೊಳ್ಳಲಿದ್ದು, ‘ಶ್ರೀರಸ್ತು’ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.


ಈಗಾಗಲೇ ಪ್ರಣಾಮ್‌ ದೇವರಾಜ್ ನಾಯಕನಾಗಿ ಘೋಷಣೆಯಾಗಿದ್ದ ಚಿತ್ರಕ್ಕೆ ಇದೀಗ ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್ ಕೂಡ ಪ್ರಮುಖ ಪಾತ್ರದಲ್ಲಿ ಸೇರ್ಪಡೆಯಾಗಿರುವುದನ್ನು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ. ಪ್ರಜ್ವಲ್‌ ಅವರ ಜನ್ಮದಿನದ ಪ್ರಯುಕ್ತ ಬಿಡುಗಡೆಗೊಂಡ ಪೋಸ್ಟರ್‌ ಹಾಗೂ ವಿಡಿಯೊದಲ್ಲಿ ಇಬ್ಬರೂ ಸಹೋದರರು ಕಾಣಿಸಿಕೊಂಡಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಆರಂಭದಲ್ಲಿ ಪ್ರೇಮಕಥೆಯಾಗಿ ಸುದ್ದಿಯಾಗಿದ್ದ ‘ಶ್ರೀರಸ್ತು’ ಇದೀಗ ಕೌಟುಂಬಿಕ ಭಾವನೆಗಳನ್ನೂ ಒಳಗೊಂಡ ಕಥೆಯಾಗಿ ರೂಪುಗೊಂಡಿದೆ. ಪ್ರೇಮದ ಜೊತೆಗೆ ಕುಟುಂಬದ ಸಂಬಂಧಗಳನ್ನೂ ತೆರೆಗೆ ತರುವ ಪ್ರಯತ್ನ ಮಾಡಲಾಗಿದೆ ಎಂದು ನಿರ್ದೇಶಕ ಶಂಕರ್‌ ರೆಡ್ಡಿ ತಿಳಿಸಿದ್ದಾರೆ. ಪ್ರಜ್ವಲ್‌ ಪಾತ್ರವು ಪ್ರಣಾಮ್‌ಗೆ ಸ್ಪರ್ಧಿಯಾಗಿರುವುದಿಲ್ಲ; ಕಥೆಯಲ್ಲಿ ಮಹತ್ವದ ಪಾತ್ರವಾಗಿರಲಿದೆ ಎಂದಿದ್ದಾರೆ.

ಚಿತ್ರದಲ್ಲಿ ಸಂಜನಾ ಆನಂದ್ ನಾಯಕಿಯಾಗಿ ನಟಿಸುತ್ತಿದ್ದು, ಸುಮನ್‌, ಆಮನಿ, ಚೈತ್ರಾ ರೈ, ರವಿ ಶಿವತೇಜ, ಜೋಶ್‌ ರವಿ ಹಾಗೂ ರವಿ ಪ್ರಕಾಶ್‌ ಸೇರಿದಂತೆ ಕನ್ನಡ ಮತ್ತು ತೆಲುಗು ಚಿತ್ರರಂಗದ ಹಲವು ಕಲಾವಿದರು ಅಭಿನಯಿಸಿದ್ದಾರೆ.

ಹರಿ ಕ್ರಿಯೇಶನ್ಸ್‌ ಬ್ಯಾನರ್‌ನಲ್ಲಿ ಹರಿಗೌಡ ನಿರ್ಮಿಸುತ್ತಿರುವ ಈ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ‘ಪುಷ್ಪ’ ಸೇರಿದಂತೆ ಹಲವು ಚಿತ್ರಗಳಲ್ಲಿ ಸಹಾಯಕ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ಬಾಲಸರಸ್ವತಿ ಛಾಯಾಗ್ರಹಣ, ಕೃಷ್ಣ ಮಾಯ ಕಲಾನಿರ್ದೇಶನ ಹಾಗೂ ಶ್ರೀ ವರ್ಕಲ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಚಿತ್ರದ ಟೀಸರ್‌ ವಿಡಿಯೊದಲ್ಲಿ ಕೇಳಿಬಂದ ಹಿನ್ನೆಲೆ ಸಂಗೀತವೂ ಸಿನಿಪ್ರಿಯರ ಗಮನ ಸೆಳೆದಿದೆ. ಶೇಖರ್‌ ಚಂದ್ರ ಸಂಗೀತ ನಿರ್ದೇಶನ ಮಾಡುತ್ತಿದ್ದು, ಈ ವರ್ಷದ ಗಮನಾರ್ಹ ಸಂಗೀತಮಯ ಚಿತ್ರಗಳಲ್ಲಿ ‘ಶ್ರೀರಸ್ತು’ ಕೂಡ ಒಂದಾಗಲಿದೆ ಎಂಬ ನಿರೀಕ್ಷೆ ಚಿತ್ರತಂಡದ್ದಾಗಿದೆ.

ಸಂಜನಾ ಆನಂದ್‌, ಪ್ರಣಾಮ್‌ ದೇವರಾಜ್ ಮತ್ತು ಪ್ರಜ್ವಲ್‌ ದೇವರಾಜ್ ಅವರ ತಾರಾ ಸಂಗಮ ಚಿತ್ರಕ್ಕೆ ಹೆಚ್ಚುವರಿ ಆಕರ್ಷಣೆಯಾಗಿದ್ದು, ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಸದ್ಯದಲ್ಲೆ ಬಿಡುಗಡೆಗೆ ಸಿದ್ಧವಿದ್ದು ಸಿನಿಪ್ರಿಯರಲ್ಲಿ ಚಿತ್ರ ನಿರೀಕ್ಷೆ ಮೂಡಿಸಿದೆ.