
ಗುರುಮಠಕಲ್: ತಾಲೂಕಿನ ಕಂದಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಚಿಂತನಹಳ್ಳಿ ಗ್ರಾಮದ ಜಲಾಲ್ ಸಾಬ್ ದರ್ಗಾದ ಹತ್ತಿರ ನಡೆಯುತ್ತಿರುವ ಹಳ್ಳ ಹುಳೆತ್ತುವ ಕಾಮಗಾರಿ ಸ್ಥಳದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಐಇಸಿ ಚಟುವಟಿಕೆಗಳಡಿ ಮನರೇಗಾ ಕೂಲಿಕಾರರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು. ಜಿಲ್ಲಾ ಪಂಚಾಯತಿ ಯಾದಗಿರಿ, ತಾಲೂಕು ಪಂಚಾಯಿತಿ ಗುರುಮಠಕಲ್ ಹಾಗೂ ಗ್ರಾಮ ಪಂಚಾಯತಿ ಕಂದಕೂರ ಇವರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಕೂಲಿಕಾರರು ಬರೀ ಕೆಲಸದಲ್ಲಿ ತೊಡಗಿಕೊಂಡರೇ ಸಾಲದು ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸಬೇಕು ಎಂದು ಗುರುಮಠಕಲ್ ತಾಲೂಕು ಪಂಚಾಯತಿಯ ಐಇಸಿ ತಾಲೂಕು ಸಂಯೋಜಕ ರಾಘವೇಂದ್ರ ತಿಳಿಸಿದರು. ಕೆಲಸದ ಸ್ಥಳದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಓಆರ್ ಎಸ್ ಪೌಡರ್ ಇಡಬೇಕು ಎಂದರು. ಸಮಯಕ್ಕೆ ಸರಿಯಾಗಿ ಊಟ ಮಾಡಿ ಚೆನ್ನಾಗಿ ನಿದ್ದೆ ಮಾಡಬೇಕು. ರಕ್ತದ ಒತ್ತಡ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಕಡ್ಡಾಯವಾಗಿ ಮಾತ್ರೆ ತೆಗೆದುಕೊಳ್ಳಬೇಕು ತಮ್ಮ ಆರೋಗ್ಯದ ಕಡೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು ಎಂದು ಸಿಎಚ್ಓ ಸಂತೋಷ್ ಚೌಹ್ವಾಣ್ ತಿಳಿಸಿದರು. ರಕ್ತದೊತ್ತಡ, ಸಕ್ಕರೆ ಕಾಯಿಲೆ ಹಾಗೂ ರಕ್ತಹೀನತೆ ತಪಾಸಣೆ ಮಾಡಲಾಯಿತು. ಮಂಡಿ ನೋವು, ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯ ಲಕ್ಷಣ ಪತ್ತೆಯಾದ ಕೂಲಿಕಾರರನ್ನು ಕಂದಕೂರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಲು ತಿಳಿಸಲಾಯಿತು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಹೆಚ್ಐಓ ಸಿದ್ದಪ್ಪ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸೇರಿದಂತೆ ಕಾಯಕ ಬಂದುಗಳು ಹಾಗೂ ಕೂಲಿಕಾರರು ಇದ್ದರು.


























