Home ಜಿಲ್ಲೆ ಅಕ್ರಮ ಚಟುವಟಿಕೆ ತಡೆಯುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧವೂ ಕ್ರಮ: ಜಿಲ್ಲಾಧಿಕಾರಿ

ಅಕ್ರಮ ಚಟುವಟಿಕೆ ತಡೆಯುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧವೂ ಕ್ರಮ: ಜಿಲ್ಲಾಧಿಕಾರಿ

ಯಾದಗಿರಿ: ಜೂ.12:ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು, ಮುರಂ ಹಾಗೂ ಇತರೆ ಉಪಖನಿಜಗಳ ಗಣಿಗಾರಿಕೆ ಮತ್ತು ಸಾಗಾಣಿಕೆ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಅವರು ಎಚ್ಚರಿಕೆ ನೀಡಿದ್ದಾರೆ.

ಯಾದಗಿರಿ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮರಳು, ಮುರಂ ಹಾಗೂ ಇತರೆ ಉಪಖನಿಜಗಳ ಗಣಿಗಾರಿಕೆ ಮತ್ತು ಸಾಗಾಣಿಕೆಯನ್ನು ತಕ್ಷಣ ತಡೆಗಟ್ಟಿ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳು ಜಿಲ್ಲಾ ಟಾಸ್ಕ್ ಫೆÇೀರ್ಸ್ ಸಮಿತಿ ಸದಸ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಜಿಲ್ಲೆಯ ಸುರಪುರ, ಶಹಾಪುರ, ವಡಗೇರಾ ಸೇರಿದಂತೆ ವಿವಿಧ ತಾಲೂಕುಗಳ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಅಕ್ರಮ ಚಟುವಟಿಕೆಗಳಲ್ಲಿ ಬಳಸಲಾಗುತ್ತಿರುವ ಯಂತ್ರೋಪಕರಣಗಳು ಹಾಗೂ ವಾಹನಗಳನ್ನು ಜಪ್ತಿ ಮಾಡಿ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸುವಂತೆ ನಿರ್ದೇಶನ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ 2026ರ ಜೂನ್ 10ರಂದು ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಅಕ್ರಮ ಮುರಂ ಗಣಿಗಾರಿಕೆಯಲ್ಲಿ ತೊಡಗಿದ್ದ ಹಿಟಾಚಿ ಯಂತ್ರವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿ 1994ರ ಪ್ರಕಾರ ನಿಯಮಾನುಸಾರ ರೂ.50 ಸಾವಿರ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗಿದೆ.

ಅಕ್ರಮ ಗಣಿಗಾರಿಕೆಗೆ ಬಳಸಿದ ಹಿಟಾಚಿ ಯಂತ್ರದ ವಿರುದ್ಧ ಶಹಾಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ವಾಹನವನ್ನು ಪೆÇಲೀಸ್ ಇಲಾಖೆ ವಶಕ್ಕೆ ಪಡೆದು ಸೈದಾಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜಿಲ್ಲೆಯಲ್ಲಿ ಅಕ್ರಮ ಮರಳು, ಮುರಂ ಹಾಗೂ ಇತರೆ ಉಪಖನಿಜಗಳ ಗಣಿಗಾರಿಕೆ ಮತ್ತು ಸಾಗಾಣಿಕೆ ತಡೆಯುವಲ್ಲಿ ಜಿಲ್ಲಾ ಟಾಸ್ಕ್ ಫೆÇೀರ್ಸ್ ಸಮಿತಿ ಸದಸ್ಯರು ನಿರ್ಲಕ್ಷ್ಯ ವಹಿಸಿದರೆ, ಅವರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಖಡಕ್ ಸೂಚನೆ ನೀಡಿದ್ದಾರೆ ಎಂದು ಜಿಲ್ಲಾ ಗಣಿತ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.