
ಪಾವಗಡ, ಜೂ. ೬- ರಾಜ್ಯಾದ್ಯಂತ ಮೇ ೨೯ ರಂದು ಶಾಲೆಗಳು ಪ್ರಾರಂಭವಾಗಿದ್ದು ಶಿಕ್ಷಣ ಇಲಾಖೆ ಶಾಲೆಗಳಲ್ಲಿ ಹಸಿರು ತೋರಣಗಳಿಂದ ಸಿಂಗರಿಸಿ ಮಕ್ಕಳಿಗೆ ಹೂಗುಚ್ಚ ನೀಡಿ ಸಿಹಿ ಹಂಚಿ ಮಕ್ಕಳ ಸ್ವಾಗತಕ್ಕೆ ಸಜ್ಜಾಗಿರುವುದು ಒಂದಡೆಯಾದರೆ, ತಾಲ್ಲೂಕಿನಲ್ಲಿ ವಿನೂತನವಾಗಿ ಬನ್ನಿ ಮಕ್ಕಳೇ ಬನ್ನಿ… ಸರ್ಕಾರಿ ಶಾಲೆಗೆ ಬನ್ನಿ…ಎಂಬ ಹಾಡಿನ ಮೂಲಕ ಆಟೋದಲ್ಲಿ ಧ್ವನಿವರ್ದಕ ಬಳಸಿ ಮಕ್ಕಳನ್ನು ಹುರಿದುಂಬಿಸಿ ಸ್ವಾಗತಿಸುವ ವಿನೂತನ ಪ್ರಚಾರ ಆಂದೋಲನವನ್ನು ತಾಲ್ಲೂಕು ಶಿಕ್ಷಣಾಧಿಕಾರಿಗಳ ಇಲಾಖೆ ಸಹಯೋಗದಲ್ಲಿ ಸ್ವಯಂ ಪ್ರೇರಿತರಾಗಿ ಆಟೋ ಚಾಲಕರ ಸಂಘದಿಂದಪಾವಗಡ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಈ ಪ್ರಚಾರ ಆಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಇಓ ರೇಣುಕಮ್ಮ ಮಾತನಾಡಿ, ಸರ್ಕಾರದ ಆದೇಶದಂತೆ ಶಾಲೆಗಳಲ್ಲಿ ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸಿ ಪ್ರತಿ ವರ್ಷದಂತೆ ಪಠ್ಯ ಚಟುವಟಿಕೆ ಕಾರ್ಯ ಆರಂಭಗೊಂಡಿದ್ದು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿ ಮಕ್ಕಳ ಉತ್ತಮ ಭವಿಷ್ಯಕ್ಕೆ ನಾಂದಿ ಹಾಡಬೇಕು ಎಂದು ಕರೆ ನೀಡಿದರು.
ಪಟ್ಟಣದ ಶನಿಮಹಾತ್ಮಾ ವೃತ್ತದಲ್ಲಿ ಮಕ್ಕಳ ಜತೆಗೂಡಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ ಎಂಬ ವೇದ ಘೋಷಣೆಯೊಂದಿಗೆ ಪೋಷಕರಿಗೆ ಕರೆ ನೀಡಿದರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಜತೆಗೂಡಿ ಪ್ರಚಾರ ನಡೆಸಲಾಯಿತು.






























