Home ಜಿಲ್ಲೆ ಕಲಬುರಗಿ ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರ್‍ಗಳ ಪರಿಷತ್ತು ನಿರ್ಜೀವ

ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರ್‍ಗಳ ಪರಿಷತ್ತು ನಿರ್ಜೀವ

ಕಲಬುರಗಿ, ಮೇ 29: ರಾಜ್ಯದಲ್ಲಿ ನಿರ್ಮಾಣವಾಗುವ ಶಾಲಾ ಕಟ್ಟಡಗಳು, ಸೇತುವೆಗಳು ಮತ್ತು ಬೃಹತ್ ಸಂಕೀರ್ಣಗಳ ಗುಣಮಟ್ಟ ಹಾಗೂ ಸುರಕ್ಷತೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಆರಂಭಿಸಿರುವ ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರ್‍ಗಳ ಪರಿಷತ್ತು ಇದೀಗ ಸರ್ಕಾರದ ಉನ್ನತ ಅಧಿಕಾರಿಗಳ ಅಸಹಕಾರದಿಂದಾಗಿ ಕೇವಲ ಕಾಗದದ ಮೇಲೆ ಉಳಿದಿದೆ ಎಂದು ಕಲಬುರಗಿ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಆಕ್ರೋಶ ವ್ಯಕ್ತಪಡಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಕಾರ್ಯದರ್ಶಿ ಮನೀಶ್ ವೈಕುಂಠ ಅವರು, 2024ರ ವಿಧಾನ ಮಂಡಲ ಅಧಿವೇಶನದಲ್ಲಿ ಕಾಯ್ದೆಯಾಗಿ ಜಾರಿಯಾದ ಈ ಪರಿಷತ್ತು ರಚನೆಯಾಗಿ ಎರಡು ವರ್ಷಗಳೇ ಕಳೆದಿವೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರ ಇಚ್ಛಾಶಕ್ತಿಯಿಂದ ಪರಿಷತ್ತು ರೂಪುಗೊಂಡರೂ, ಉನ್ನತ ಮಟ್ಟದ ಅಧಿಕಾರಿಗಳು ಕಚೇರಿ ನೀಡಲು ಮತ್ತು ನಿಯಮಾವಳಿಗಳನ್ನು ರೂಪಿಸಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸ ಎಂದು ಕಿಡಿಕಾರಿದರು.
ಸರ್ಕಾರ ಆದೇಶಿಸಿದಂತೆ ಪರಿಷತ್ತಿಗೆ ಕೂಡಲೇ ಬೆಂಗಳೂರಿನಲ್ಲಿ ಸ್ವತಂತ್ರ ಕಚೇರಿ ಮತ್ತು ಅಗತ್ಯ ಸಿಬ್ಬಂದಿ ನೇಮಕ ಮಾಡಬೇಕು. ವೃತ್ತಿಪರತೆ ಕಾಪಾಡಲು ಅಗತ್ಯವಿರುವ ನಿಯಮಗಳು ಮತ್ತು ನಿಬಂಧನೆಗಳನ್ನು ತಕ್ಷಣ ಅಧಿಸೂಚಿಸಬೇಕು. ಮೆಡಿಕಲ್ ಮತ್ತು ಲೀಗಲ್ ಕೌನ್ಸಿಲ್ ಮಾದರಿಯಲ್ಲಿ ಸಿವಿಲ್ ಇಂಜಿನಿಯರಿoಗ್ ಕ್ಷೇತ್ರದಲ್ಲೂ ಪರಿಷತ್ತು ಜಾರಿಯಾದರೆ ಮಾತ್ರ ಕಳಪೆ ಕಾಮಗಾರಿ ಮತ್ತು ಇಂಜಿನಿಯರ್ ಅಲ್ಲದವರಿಂದ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದರು.
ಪರಿಷತ್ ಸದಸ್ಯರಾದ ಮುರಳೀಧರ ಜಿ. ಕರಲಗಿಕರ್, ಹಾವಶೆಟ್ಟಿ ಪಾಟೀಲ್, ರಾಜ್ಯ ಒಕ್ಕೂಟದ ಕಾರ್ಯದರ್ಶಿ ಸಿದ್ರಾಮ ನಿರೋಣಿ, ಕಲಬುರಗಿ ಅಸೋಸಿಯೇಷನ್ ಉಪಾಧ್ಯಕ್ಷ ಅನಿಲಕುಮಾರ್ ಗಂಗಾಣಿ ಇದ್ದರು.


ರಾಜ್ಯದ ನಾಲ್ಕೂ ಕಂದಾಯ ವಿಭಾಗಗಳಿಂದ ಚುನಾಯಿತರಾದ 18 ಸದಸ್ಯರ ತಂಡದೊoದಿಗೆ ಪರಿಷತ್ತು ರಚನೆಯಾಗಿದೆ. ಮೇ 23, 2025ರಂದೇ ಸರ್ಕಾರವು ಪರಿಷತ್ತಿಗೆ ಬಾಡಿಗೆ ರಹಿತ ವಸತಿ ಸೌಲಭ್ಯ ಕಲ್ಪಿಸುವಂತೆ ಆದೇಶಿಸಿದ್ದರೂ, ಅಧಿಕಾರಿಗಳು ಕಡತಗಳನ್ನು ತಿರುಗಿಸುತ್ತಾ ಕಾಲಹರಣ ಮಾಡುತ್ತಿದ್ದಾರೆ. ಸದಸ್ಯರು ಆನ್‍ಲೈನ್‍ನಲ್ಲಿ 18ಕ್ಕೂ ಹೆಚ್ಚು ಸಭೆ ನಡೆಸಿ ಸಿದ್ಧತೆ ಮಾಡಿಕೊಂಡಿದ್ದರೂ, ಅಧಿಕಾರಿಗಳ ಅಸಹಕಾರದಿಂದಾಗಿ ಪರಿಷತ್ತು ಅಸ್ತಿತ್ವಕ್ಕೆ ಬಂದಿಲ್ಲ.
-ಮುರಳೀಧರ ಜಿ. ಕರಲಗಿಕರ್, ಪರಿಷತ್ ಸದಸ್ಯ