Home ಜಿಲ್ಲೆ ಕಲಬುರಗಿ ಸಂಸ್ಥೆಯ ಚಾಲಕರು ಸೇವಾ ಯೋಧರು:ಅರುಣಕುಮಾರ ಪಾಟೀಲ

ಸಂಸ್ಥೆಯ ಚಾಲಕರು ಸೇವಾ ಯೋಧರು:ಅರುಣಕುಮಾರ ಪಾಟೀಲ

ಕಲಬುರಗಿ,ಮೇ.೨೯: ಸಾರಿಗೆ ಸಂಸ್ಥೆಯ ಚಾಲಕರು ಕೇವಲ ವಾಹನ ಚಾಲಕರು ಮಾತ್ರವಲ್ಲ, ಪ್ರತಿದಿನ ಸಾವಿರಾರು ಪ್ರಯಾಣಿಕರ ಜೀವವನ್ನು ಸುರಕ್ಷಿತವಾಗಿ ತಲುಪಿಸುವ ಹೊಣೆಗಾರಿಕೆಯನ್ನು ಹೊತ್ತಿರುವ ಸೇವಾ ಯೋಧರಾಗಿದ್ದಾರೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಅರುಣಕುಮಾರ ಪಾಟೀಲ ಹೇಳಿದರು.

ಇತ್ತೀಚೆಗೆ ವಿಜಯನಗರ ಜಿಲ್ಲೆಯ ಕೂಡ್ಲಗಿ ಘಟಕದಲ್ಲಿ ಆಯೋಜಿಸಿದ ೨೦೨೫-೨೬ನೇ ಸಾಲಿನ ಇಂಧನ ಉಳಿತಾಯ ದ್ವಿಮಾಸಿಕ ಕಾರ್ಯಕ್ರಮದಡಿ ಕೆ.ಎಂ.ಪಿ.ಎಲ್ ವೃದ್ಧಿಯ ಮೂಲಕ ಅತ್ಯುತ್ತಮ ಇಂಧನ ಉಳಿತಾಯ ಸಾಧಿಸಿ ನಿಗಮದ ಆರ್ಥಿಕ ಸದೃಢತೆಗೆ ಕೊಡುಗೆ ನೀಡಿದ ನಿಗಮದ ವಿಭಾಗೀಯ ನಿಯಂತ್ರಕರು, ವಿಭಾಗೀಯ ಯಾಂತ್ರಿಕ ಅಭಿಯಂತರರು, ಘಟಕ ವ್ಯವಸ್ಥಾಪಕರು, ಚಾಲಕರು ಹಾಗೂ ಯಾಂತ್ರಿಕ ಸಿಬ್ಬಂದಿಗಳನ್ನು ಸನ್ಮಾನಿಸಿ ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಖಾಸಗಿ ವಾಹನಗಳ ಚಾಲಕರಿಗಿಂತ ನಮ್ಮ ನಿಗಮದ ಚಾಲಕರು ಸೇವಾ ಮನೋಭಾವ, ಶಿಸ್ತು, ಪ್ರಾಮಾಣಿಕತೆ, ನಿಷ್ಠೆ ಹಾಗೂ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಾ ವಿಭಿನ್ನ ಸ್ಥಾನ ಹೊಂದಿದ್ದಾರೆ. ನಮ್ಮ ಚಾಲಕರ ಕಾರ್ಯಕ್ಷಮತೆ ನಿಜವಾಗಿಯೂ ಹೆಮ್ಮೆಯ ಸಂಗತಿಯಾಗಿದೆ. ಜೊತೆಗೆ ಯಾಂತ್ರಿಕ ನಿರ್ವಹಣೆ ಮಾಡುವ ಎಲ್ಲಾ ಯಾಂತ್ರಿಕ ಸಿಬ್ಬಂದಿಯ ಶ್ರದ್ಧೆ, ನಿಷ್ಠೆ ಹಾಗೂ ಸೇವಾ ಮನೋಭಾವದಿಂದಲೇ ನಿಗಮ ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ನೀಡುತ್ತಿದೆ ಎಂದು ಸಿಬ್ಬಂದಿಯ ಕಾರ್ಯವೈಖರಿಯನ್ನು ಶ್ಲಾಘಿಸಿದರು. 

ಇಂದು ಕರ್ನಾಟಕದ ಸಾರಿಗೆ ವ್ಯವಸ್ಥೆ ದೇಶದಲ್ಲಿಯೇ ಮಾದರಿಯಾಗಿರುವುದಕ್ಕೆ ನೌಕರರ ಅವಿರತ ಶ್ರಮ, ಸೇವಾ ಮನೋಭಾವನೆಯೆ ಕಟರಣವಾಗಿದೆ. ಹಲವು ರಾಜ್ಯಗಳ ಸಾರಿಗೆ ಸೇವೆಗೆ ಹೋಲಿಸಿದರೆ ಕರ್ನಾಟಕದ ಸಾರಿಗೆ ಸೇವೆ ಪ್ರಯಾಣಿಕರ ವಿಶ್ವಾಸ ಗಳಿಸಿರುವುದು ಹೆಮ್ಮೆಯ ವಿಚಾರ. ಅತ್ಯುತ್ತಮ ಸೇವೆಗಳಿಗಾಗಿ ನಮ್ಮ ನಿಗಮ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದೆ ಎಂದರು.

ಇದೇ ಸಂದರ್ಭದಲ್ಲಿ ಕೆ.ಎಂ.ಪಿ.ಎಲ್ ಉತ್ತಮ ಸಾಧನೆಗೈದ ೪೩ ಜನ ಚಾಲಕರು, ೪ ಜನ ವಿಭಾಗೀಯ ನಿಯಂತ್ರಣಾಧಿಕಾರಿಗಳು, ೪ ಜನ ವಿಭಾಗೀಯ ಯಾಂತ್ರಿಕ ಅಭಿಯಂತರರು ಹಾಗೂ ೧೨ ಜನ ಘಟಕ ವ್ಯವಸ್ಥಾಪಕರು ಹಾಗೂ  ೧೦ ಜನ ಯಾಂತ್ರಿಕ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಒಟ್ಟು ೭೩ ಜನ ಸಾಧಕರಿಗೆ ನಗದು ಬಹುಮಾನ, ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸುಶೀಲಾ ಬಿ., ಮುಖ್ಯ ಯಾಂತ್ರಿಕ ಅಭಿಯಂತರರು, ವಿಭಾಗೀಯ ನಿಯಂತ್ರಕರು ಸೇರಿದಂತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.